ಪ್ರಮುಖ ಸುದ್ದಿ

ಸಂಪುಟ ವಿಸ್ತರಣೆಗೆ ಮೋದಿ ಚಿಂತನೆ: ಕರ್ನಾಟಕಕ್ಕೆ ಸಿಂಹ ಪಾಲು…?

ಪ್ರಮುಖ ಸುದ್ದಿ, ಬೆಂಗಳೂರು, ಆ.18: ರಾಜ್ಯ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಸರತ್ತು ನಡೆಸುತ್ತಿದ್ದರೆ, ಅತ್ತ ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಸಂಪುಟದಲ್ಲಿ ಕರ್ನಾಟಕಕ್ಕೆ ಸಿಂಹಪಾಲು ನೀಡಲು ಮುಂದಾಗಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಈ ಬಾರಿ ಕನಿಷ್ಠ ಮೂರು ಸಚಿವ ಸ್ಥಾನ ಸಿಗುವ ಲಕ್ಷಣಗಳು ಗೋಚರಿಸಿವೆ.

ಯಾವುದೇ ಕ್ಷಣದಲ್ಲೂ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. 2018ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮೋದಿಯವರು ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ. ಸಿದ್ದರಾಮಯ್ಯ ಅತಿಯಾಗಿ ಪ್ರತಿಪಾದಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮೋದಿ ಕೂಡ ಅನುಸರಿಸುತ್ತಿದ್ದು, ರಾಜ್ಯ ಸರ್ಕಾರಕ್ಕೆ ಈ ಮೂಲಕ ತಿರುಗೇಟು ನೀಡಲಿದ್ದಾರೆ.

ಈಗಾಗಲೇ ಸಂಪುಟಕ್ಕೆ ತೆಗೆದುಕೊಳ್ಳಲಿರುವ ಸಂಸದರ ಜಾತಕವನ್ನು ರಹಸ್ಯವಾಗಿ ತರಿಸಿಕೊಂಡಿರುವ ಮೋದಿ ಹಿರಿತನ, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಪ್ರದೇಶವಾರು ಜಾತಿ ಸಮೀಕರಣದ ಮೂಲಕವೇ ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗಿದ್ದಾರೆ.  ಪ್ರಮುಖವಾಗಿ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಧ್ಯ ಕರ್ನಾಟಕ ಇಲ್ಲವೇ ಬೆಂಗಳೂರಿನಿಂದ ಓರ್ವ ಸಂಸದರಿಗೆ ಸಚಿವ ಸ್ಥಾನ ದಕ್ಕುವುದು ಬಹುತೇಕ ಖಚಿತವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಹಿಂದ ವರ್ಗವನ್ನೇ ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಈ ಸಮುದಾಯಕ್ಕೆ ಸಿಂಹಪಾಲು ನೀಡಿದ್ದಾರೆ. ಇದೀಗ ಮೋದಿ ಕೂಡ ಇದೇ ಸಮೀಕರಣದ ಮೂಲಕ ಸಂಪುಟ ವಿಸ್ತರಣೆ ಮಾಡಲಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: