ಮೈಸೂರು

ಮೈಸೂರಿಗೆ ಹಲವು ಯೋಜನೆಗಳನ್ನು ಪ್ರಕಟಿಸಿದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್

ರಾಜ್ಯ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರು ಮೈಸೂರಿಗೆ ಕೋಟ್ಯಂತರ ರೂ.ಗಳ ಯೋಜನೆಯನ್ನು ಪ್ರಕಟಿಸಿದ್ದು, ಮಾರುಕಟ್ಟೆಗಳ ಮರುನಿರ್ಮಾಣ, ರಸ್ತೆಗಳ ಅಭಿವೃದ್ಧಿ, ಅಕ್ವೇರಿಯಂ ನಿರ್ಮಾಣ, ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಹಲವು ಕಾರ್ಯಕ್ರಮಗಳು ಯೋಜನೆಯ ಮೂಲಕ ಕಾರ್ಯರೂಪಕ್ಕೆ ಬರಲಿವೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವ ರೋಷನ್ ಬೇಗ್ ಮಾತನಾಡಿ, ಮೈಸೂರಿನ ದೇವರಾಜ, ವಾಣಿವಿಲಾಸ, ಮಂಡಿಮಾರುಕಟ್ಟೆಗಳನ್ನು ಒಟ್ಟು 145 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ದೇವರಾಜ ಮಾರುಕಟ್ಟೆಗೆ 80 ಕೋಟಿ ರೂ., ವಾಣಿವಿಲಾಸ ಮಾರುಕಟ್ಟೆಗೆ 40 ಕೋಟಿ ರೂ. ಹಾಗೂ ಮಂಡಿ ಮಾರುಕಟ್ಟೆಗೆ 25 ಕೋಟಿ ರೂಪಾಯಿಗಳನ್ನು ಕಾಮಗಾರಿಗಾಗಿ ನಿಗದಿಪಡಿಸಲಾಗಿದೆ ಎಂದರು. ಚಾಮರಾಜೇಂದ್ರ ಮೃಗಾಲಯದ ಆವರಣದಲ್ಲಿ ಅಕ್ವೇರಿಯಂನ್ನು 15 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುವುದು. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಯೂರ ವಾಣಿಜ್ಯ ಸಂಕೀರ್ಣವನ್ನು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದ್ದು ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ತಿಳಿಸಿದರು.

ಶಿಥಿಲಾವಸ್ಥೆಯಲ್ಲಿರುವ ಲ್ಯಾನ್ಸ್^ಡೌನ್ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ತೀರ್ಮಾನಿಸಿದ್ದು 25 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ. ಟ್ರಕ್ ಟರ್ಮಿನಲ್ ಗಳನ್ನು ನಿರ್ಮಿಸುವ ಯೋಜನೆ ಇದೆ. ಹುಣಸೂರು ರಸ್ತೆಯ ನಾಗವಾಲ, ಹೊರವರ್ತುಲ ರಸ್ತೆಯ ಬೆಲವೆತ್ತ, ಟಿ. ನರಸೀಪುರ ರಸ್ತೆಗಳಲ್ಲಿ 43 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.

ಕೆಸರಕೆರೆ, ರಾಯನಕೆರೆ, ಮೈಸೂರು ಕಸಬಾ, ನಾಚನಹಳ್ಳಿಯಲ್ಲಿ ಎಸ್.ಟಿ.ಪಿ. ನಿರ್ಮಿಸಲಾಗುವುದು. ಬೆಳಗೊಳ, ಚಿಕ್ಕಹಳ್ಳಿ, ಕಳಸ್ತವಾಡಿ, ಉದ್ಭೂರು, ಕಡಕೊಳ, ಹುಲಿಕೆರೆ ಸೇರಿದಂತೆ 8 ಟಿ.ಎಸ್.ಪಿ.ಗಳನ್ನು ಸ್ಥಾಪಿಸುವ ಕುರಿತೂ ಪ್ರಸ್ತಾವನೆ ನಮ್ಮ ಮುಂದಿದೆ ಎಂದು ತಿಳಿಸಿದರು.

ಈ ಸಂದರ್ಭ ಮೇಯರ್ ಬಿ. ಎಲ್. ಭೈರಪ್ಪ, ಶಾಸಕ ಎಂ.ಕೆ. ಸೋಮಶೇಖರ್, ಜಿಲ್ಲಾಧಿಕಾರಿ ಡಿ. ರಂದೀಪ್, ಮುಡಾ ಆಯುಕ್ತ ಡಾ. ಎಂ. ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: