ಮೈಸೂರು

ಹೊಸ ಉದ್ದಿಮೆಗಳಿಗೆ ಪರವಾನಗಿ ನೀಡಿ ಆದಾಯ ಹೆಚ್ಚಿಸಿ: ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಸಲಹೆ

ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಮಹಾನಗರ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಕೆಯುಡಬ್ಲ್ಯೂಎಸ್ ಮತ್ತು ಡಿಬಿ, ಕೆಯುಐಡಿಎಫ್‍ಸಿ ಹಾಗೂ ಡಿಯುಎಲ್‍ಟಿ ಅಧಿಕಾರಿಗಳೊಂದಿಗೆ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಶತಮಾನಗಳ ಇತಿಹಾಸವುಳ್ಳ ದೇವರಾಜ ಮಾರುಕಟ್ಟೆಯನ್ನು ಸಂಪೂರ್ಣ ಕೆಡವಿ ಪಾರಂಪರಿಕತೆಗೆ ಧಕ್ಕೆಯಾಗದಂತೆ ಇದೇ ಮಾದರಿಯಲ್ಲಿ ನಿರ್ಮಾಣ ಮಾಡಬೇಕು. ದೇಶದ ಸ್ವಚ್ಛ ನಗರ ಎಂಬ ಬಿರುದು ಪಡೆದಿರುವ ಮೈಸೂರಿನ ಸ್ವಚ್ಛತೆಯನ್ನು ಕಾಪಾಡಲು ಘನ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಮಾರ್ಗ ಕಂಡುಹಿಡಿಯಬೇಕು. ನಗರದ ಎಲ್ಲೆಡೆ ನೂರಾರು ಮೊಬೈಲ್ ಟವರ್‍ಗಳು ತಲೆ ಎತ್ತಿದ್ದು ಇವುಗಳಿಂದ ಬರಬೇಕಾದ ಆದಾಯ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಇವೆಲ್ಲವನ್ನು ವಕೀಲರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಸ ಉದ್ದಿಮೆಗಳಿಗೆ ಪರವಾನಗಿ ನೀಡಿ ಆದಾಯವನ್ನು ಹೆಚ್ಚಿಸಿ ಎಂದು ಸಚಿವರು ಸಲಹೆ ನೀಡಿದ್ದಾರೆ.

ಸಚಿವರ ಪ್ರಶ್ನೆಗಳಿಗೆ ಉತ್ತರಿಸಿದ ಅಧಿಕಾರಿಗಳು, ನಗರದಲ್ಲಿ ಸುಮಾರು 300 ಮೊಬೈಲ್ ಟವರ್‍ಗಳಿದ್ದು, ಸೇವಾ ತೆರಿಗೆ ವಿಚಾರವಾಗಿ ಕೋರ್ಟ್‍ನಲ್ಲಿ ತಡೆಯಾಜ್ಞೆ ಇರುವುದರಿಂದ ಯಾವುದೇ ಆದಾಯ ಬರುತ್ತಿಲ್ಲ. ಈ ಕುರಿತು ವಕೀಲರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪೌರ ಕಾರ್ಮಿಕರಲ್ಲಿ 691 ಖಾಯಂ ಆಗಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ 1645 ಪೌರ ಕಾರ್ಮಿಕರಿಗೆ ಸರ್ಕಾರದ ಆದೇಶದಂತೆ ಏಜೆನ್ಸಿ ಅವರಿಂದ ಸಮರ್ಪಕವಾಗಿ ಸಂಬಳ ವಿತರಣೆಯಾಗುವಂತೆ ಅಧಿಕಾರಿಗಳು ಎಲ್ಲಾ ಸೂಕ್ತ ದಾಖಲಾತಿಯೊಂದಿಗೆ ನೋಡಿಕೊಳ್ಳಬೇಕು. ನಗರದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಜಾಹೀರಾತು ಫಲಕಗಳನ್ನು ಬಳಸಿಕೊಳ್ಳುವ ಮೂಲಕ ಪಾಲಿಕೆ ಆದಾಯವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದರಲ್ಲದೆ ಗೃಹಬಳಕೆಯ ನೀರಿನ ಬಾಕಿ ಕಂದಾಯದ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ಹಲವು ಕೈಗಾರಿಕೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಈ ಸೌಕರ್ಯವನ್ನು ವಾಣಿಜ್ಯ ಬಳಕೆ ಹಾಗೂ ಕೈಗಾರಿಕೆಗಳಿಗೂ ವಿಸ್ತರಿಸಬೇಕು ಎಂದು ಮೇಯರ್ ಮನವಿ ಮಾಡಿಕೊಂಡರು. ಆದರೆ ಸಚಿವರು ಮೇಯರ್ ಮನವಿಯನ್ನು ತಿರಸ್ಕರಿಸಿದರು.

ನಗರದಲ್ಲಿ ಯುಜಿಡಿ ಸಂಪರ್ಕ ತೀರ ಹದಗೆಟ್ಟಿದ್ದು, ಕೆಸರೆ ಭಾಗದಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಸೇರಿಕೊಳ್ಳುತ್ತಿದೆ. ಇದರಿಂದಾಗಿ ಅಲ್ಲಿನ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಜೊತೆಗೆ ಕುಕ್ಕರಹಳ್ಳಿ ಕೆರೆ, ಲಿಂಗಾಂಬುಧಿ ಕೆರೆ, ಕಾರಂಜಿ ಕೆರೆ, ದಳವಾಯಿ ಕೆರೆಗಳೆಲ್ಲಾ ಯುಜಿಡಿ ಲೈನ್‍ ಸಂಪರ್ಕದಿಂದಾಗಿ ಮಲೀನಗೊಳ್ಳುತ್ತಿದ್ದು, ಸಮಸ್ಯೆ ತೀವ್ರವಾಗದಂತೆ ಎಚ್ಚೆತ್ತುಕೊಳ್ಳಿ ಎಂದರು.

12 ವರ್ಷಗಳಿಗೊಮ್ಮೆ ಹರಾಜು:

ಪಾಲಿಕೆ ವಾಪ್ತಿಗೆ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ಪ್ರತಿ 12 ವರ್ಷಗಳಿಗೊಮ್ಮೆ ಹರಾಜು ಪ್ರಕ್ರಿಯೆ ಮೂಲಕ ಬಾಡಿಗೆಗೆ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಪೊನ್ನುರಾಜ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಮೇಯರ್ ಭೈರಪ್ಪ, ಪಾಲಿಕೆ ವ್ಯಾಪ್ತಿಯಲ್ಲಿ ಅಂಗಡಿ ಮಳಿಗೆಗಳನ್ನು ಅನೇಕ ಬಡ ವ್ಯಾಪಾರಸ್ಥರು ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ. ಇದರಿಂದ ಅವರ ಜೀವನ ನಿರ್ವಹಣೆಗೆ ತೊಂದರೆಯಾಗಲಿದೆ. ಹಾಗಾಗಿ ಬಾಡಿಗೆ ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳುವ ಮುಖೇನ ಹರಾಜು ಪ್ರಕ್ರಿಯೆಗೆ ಕ್ರಮ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವರು ಕಾರ್ಪೊರೇಷನ್ ಎಂದರೆ ಪುಕ್ಕಟ್ಟೆ ಜಾಗವಲ್ಲ. ಈ ಬಗ್ಗೆ ಹೈಕೋರ್ಟ್‍ನಿಂದ ಆದೇಶ ಬಂದಿದ್ದು, ಅದರ ಉಲ್ಲಂಘನೆಯಾಗಬಾರದು ಎಂದು ಹೇಳಿದರು.

ತಂತ್ರಜ್ಞಾನ ಬಳಸಿಕೊಳ್ಳಿ:

ದೇಶದ ಸ್ವಚ್ಛ ನಗರ ಎಂದು ಬಿರುದು ಪಡೆದಿರುವ ಮೈಸೂರಿನ ಅಂದ ಹೆಚ್ಚಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ಸತತ 2ನೇ ಬಾರಿ ಸ್ವಚ್ಛ ನಗರಿ ಬಿರುದು ಬಂದಿದ್ದು ಮೈಸೂರಿಗೆ ರಾಯಚೂರು, ಮಂಗಳೂರು ಪೈಪೋಟಿ ನೀಡುತ್ತಿವೆ. 3ನೇ ಬಾರಿ ಈ ಪ್ರಶಸ್ತಿಯನ್ನು ಪಡೆದುಕೊಳ್ಳಲು ತಂತ್ರಜ್ಞಾನದೊಂದಿಗೆ ಹೆಚ್ಚಿನ ಶ್ರಮವೂ ಬೇಕಾಗಿದೆ. ನಗರದಲ್ಲಿ ದಿನನಿತ್ಯ ಸಂಗ್ರಹವಾಗುತ್ತಿರುವ 402 ಟನ್ ಕಸವನ್ನು ತಂತ್ರಜ್ಞಾನ ಬಳಿಸಿಕೊಂಡು ವಿಲೇವಾರಿ ಮಾಡಿ ಎಂದು ಸಲಹೆ ನೀಡಿದರು.

ಪಾರಂಪರಿಕತೆ ಹಾಗೇ ಇರಲಿ:

ದೇವರಾಜ ಮಾರುಕಟ್ಟೆ ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿದ್ದು  ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಿ ಪುನರ್ ನಿರ್ಮಾಣ ಮಾಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇವರಾಜ ಮಾರುಕಟ್ಟೆಯ ಮರು ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಹಾಗಾಗಿ ಹಾಲಿ ವ್ಯಾಪಾರಿಗಳಿಗೆ ಮಳಿಗೆ ತೆರವುಗೊಳಿಸಲು ನೋಟೀಸ್ ನೀಡಲಾಗಿದೆ. ಆದರೆ ವ್ಯಾಪಾರಸ್ಥರು ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದು ಇದನ್ನು ಬಗೆಹರಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ ಎಂದು ಸೂಚಿಸಿದರು.

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿಸಲು ಆದೇಶ:

ಪುರಭವನದ ಪರಿಸ್ಥಿತಿ ಕುರಿತು ವಿಚಾರಿಸಿದ ಸಚಿವರು, ಪುರಭವನ ನವೀಕರಣಕ್ಕಾಗಿ ಸರ್ಕಾರದಿಂದ ಮಂಜೂರಾದ ಹಣ ಎಷ್ಟರ ಮಟ್ಟಿಗೆ ಸದ್ವಿನಿಯೋಗವಾಗಿದೆ. ಕಾಮಗಾರಿ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತರು, ಪುರಭವನ ನವೀಕರಣಕ್ಕಾಗಿ 2.8 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ 1.1 ಕೋಟಿ ರೂ. ಮಾತ್ರ ಬಿಡುಗಡೆಗೊಂಡಿದೆ. ಆದರೆ ಗುತ್ತಿಗೆದಾರ ರಾಜಮಾರ್ಗ ಕಾಮಗಾರಿಯಲ್ಲಿ ಹಣ ದೊರೆಯಲಿಲ್ಲವೆಂಬ ಕಾರಣಕ್ಕಾಗಿ ಉಳಿದ ಮೂರು ಕಾಮಗಾರಿಗಳನ್ನು ನಿರ್ಲಕ್ಷಿಸಿದ್ದು, ಅದರಲ್ಲಿ ಪುರಭವನವೂ ಸೇರಿದೆ ಎಂದು ಉತ್ತರಿಸಿದರು. ಇದಕ್ಕೆ ಸಚಿವರು ಸಿಟ್ಟಿನಿಂದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ, ಆ ಮೂಲಕ ಆತನಿಗೆ ಸರ್ಕಾರದ ಯಾವುದೇ ಟೆಂಡರ್‍ನಲ್ಲಿ ಪಾಲ್ಗೊಳ್ಳದಂತೆ ಮಾಡಿ ಎಂದು ಆದೇಶಿಸಿದರು.

ಸಭೆಯಲ್ಲಿ ಶಾಸಕ ಸೋಮಶೇಖರ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಪೊನ್ನುರಾಜ್, ಮೇಯರ್ ಬಿ.ಎಲ್. ಭೈರಪ್ಪ, ಉಪಮೇಯರ್ ವನಿತಾಪ್ರಸನ್ನ, ಪಾಲಿಕೆ ಆಯುಕ್ತ ಜಿ. ಜಗದೀಶ್, ನಗರ ಪಾಲಿಕೆ ಸದಸ್ಯರು, ವಲಯ ಅಧಿಕಾರಿಗಳು, ಅಭಿಯಂತರರು ಹಾಗೂ ಪಾಲಿಕೆ ಸಿಬ್ಬಂದಿ ಹಾಜರಿದ್ದರು.

Leave a Reply

comments

Related Articles

error: