ಕರ್ನಾಟಕಪ್ರಮುಖ ಸುದ್ದಿ

ಜಗತ್ತಿಗೆ ಶಾಂತಿ-ಅಹಿಂಸೆಯನ್ನು ಹಾಗೂ ಉತ್ತಮ ಸಂಸ್ಕಾರವನ್ನು ಜೈನರು ನೀಡಿದ್ದಾರೆ : ಸಚಿವ ಪ್ರದೀಪ್ ಜೈನ್ ಆದಿತ್ಯ

ರಾಜ್ಯ(ಹಾಸನ)ಆ.20:- ದೇಶದಲ್ಲಿ ಜೈನ ಸಮುದಾಯ ಕಡಿಮೆ ಸಂಖ್ಯೆಯಲ್ಲಿದ್ದರೂ, ಜಗತ್ತಿಗೆ ಶಾಂತಿ-ಅಹಿಂಸೆಯನ್ನು ಹಾಗೂ ಉತ್ತಮ ಸಂಸ್ಕಾರವನ್ನು ನೀಡಿದ್ದಾರೆ ಎಂದು ಮಾಜಿ ಕೇಂದ್ರ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ರಾಜ್ಯ ಸಚಿವ ಪ್ರದೀಪ್ ಜೈನ್ ಆದಿತ್ಯ ತಿಳಿಸಿದರು.

ಶ್ರವಣಬೆಳಗೊಳ ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ವಿಶ್ವದ ಗಮನ ಸೆಳೆದಿರುವ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೂ ಮುನ್ನ ಕಾಂಗ್ರೆಸ್  ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಾಹುಬಲಿಯ ದರ್ಶನ ಪಡೆಯಲು ಇಲ್ಲಿಗೆ ಆಗಮಿಸುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದು, ಮಹೋತ್ಸವಕ್ಕೂ ಮೊದಲು ಇಲ್ಲಿಗೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪಾವನ ಸಾನಿಧ್ಯ ವಹಿಸಿ ಮಾತನಾಡಿ, ದೇಶದ ಪ್ರಥಮ ಪ್ರಧಾನಿ ಜವಾಹಾರಲಾಲ್ ನೆಹರೂರವರು ತಮ್ಮ ಪುತ್ರಿ ಇಂದಿರಾ ಗಾಂಧಿಯವರೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ವಿಂಧ್ಯಗಿರಿ ಬೆಟ್ಟದಲ್ಲಿರುವ ಬಾಹುಬಲಿ ಮೂರ್ತಿಯ ದರ್ಶನ ಪಡೆದು ದೇಶದ ಅದ್ಭುತ ಸಂಸ್ಕೃತಿಯನ್ನು ಹೊಂದಿರುವ ಈ ಭವ್ಯ ಮೂರ್ತಿಯ ನಿರಂತರ ಸಂರಕ್ಷಣೆ ಆಗಬೇಕು ಎಂದು ಹೇಳಿದ್ದರು. ಹಾಗೆಯೇ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು 1981 ರಲ್ಲಿ ಜರುಗಿದ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಆಗಮಿಸಿ ಬಾಹುಬಲಿ ಸ್ವಾಮಿಗೆ ಪುಷ್ಪವೃಷ್ಠಿ ಮಾಡಿ ಮಹೋತ್ಸವಕ್ಕೆ ಚಾಲನೆ ನೀಡಿದ್ದನ್ನು ಸ್ಮರಿಸಿ, ಈಗ ಅವರ ಸೊಸೆ ಸೋನಿಯಾ ಗಾಂಧಿ ಹಾಗೂ ಮೊಮ್ಮಗ ರಾಹುಲ್ ಗಾಂಧಿಯವರು ಕ್ಷೇತ್ರಕ್ಕೆ ಆಗಮಿಸಲು ಅಪೇಕ್ಷೆಪಟ್ಟಿರುವುದನ್ನು ತಿಳಿದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರನ್ನು ಹಾಗೂ ಇತರ ಗಣ್ಯರನ್ನು ಕ್ಷೇತ್ರಕ್ಕೆ ಕರೆತರುವ ಜವಾಬ್ದಾರಿಯನ್ನು ಪ್ರದೀಪ್ ಜೈನ್ ಆದಿತ್ಯರವರಿಗೆ ವಹಿಸಿದರು.

ವರ್ಧಮಾನಸಾಗರ ಮಹಾರಾಜರು ಆಶೀರ್ವಚನ ನೀಡಿದರು. ಪುಷ್ಪದಂತಸಾಗರ ಮಹಾರಾಜರು, ಪಂಚಕಲ್ಯಾಣಕ ಸಾಗರ ಮಹಾರಾಜರು, ಚಂದ್ರಪ್ರಭಸಾಗರ ಮಹಾರಾಜರು, ಅಮಿತಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿಗಳು, ಮಾತಾಜಿಯವರು ಪಾವನ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮಕ್ಕೂ ಮೊದಲು ಮಾಜಿ ಸಚಿವರನ್ನು ಪೂರ್ಣಕುಂಭ ಮಂಗಲ ಕಲಶಗಳಿಂದ ಸ್ವಾಗತಿಸಲಾಯಿತು. ಚಾತುರ್ಮಾಸ ಆಚರಿಸುತ್ತಿರುವ ತ್ಯಾಗಿವೃಂದಕ್ಕೆ ಆಹಾರ ಧಾನ್ಯಗಳನ್ನು ಕೊಡುಗೆಯಾಗಿ ನೀಡಿದ ಮಂಡ್ಯ ಜೈನ ಸಮಾಜದ ಅಧ್ಯಕ್ಷ ಪದ್ಮನಾಭ್‍ರವರನ್ನು ಈ ವೇಳೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾಮಸ್ತಕಾಭಿಷೇಕ ಮಹೋತ್ಸವ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್, ಮಹಾವೀರ್ ಸೂಜಿ, ಪ್ರಮೋದ್ ಜೈನ್, ಶ್ರವಣಬೆಳಗೊಳ ಜೈನ ಸಮಾಜದ ಅಧ್ಯಕ್ಷರಾದ ಜಿ.ಪಿ.ಪದ್ಮಕುಮಾರ್, ಕೂಷ್ಮಾಂಡಿನಿ ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ್, ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಎಸ್.ಕೆ.ರಾಘವೇಂದ್ರ, ಗ್ರಾಮ ಪಂಚಾಯ್ತಿ ಸದಸ್ಯ ಎಸ್.ಎಂ.ಜನಾರ್ಧನ್ ಮುಂತಾದವರು ಉಪಸ್ಥಿತರಿದ್ದರು. (ಜಿ.ಕೆ.ಎಸ್.ಎಚ್)

 

Leave a Reply

comments

Related Articles

error: