ಮೈಸೂರು

ಮೇಳದಲ್ಲಿ ಉದ್ಯೋಗ ಪಡೆದು ಮತ್ತೊಬ್ಬರಿಗೆ ಸಹಾಯ ಮಾಡಿ: ಶಾಸಕ ಸೋಮಶೇಖರ್

ಮಕ್ಕಳು ವಿದ್ಯಾವಂತರಾಗಿದ್ದರೂ ಅವರಿಗೆ ಯಾವ ಮಾರ್ಗದಲ್ಲಿ ಹೋಗಬೇಕೆನ್ನುವುದು ತಿಳಿದಿರುವುದಿಲ್ಲ. ಅವರಿಗೆ ಮಾರ್ಗದರ್ಶನ ನೀಡಬೇಕಾಗಿರುವುದು ಹಿರಿಯರ ಕರ್ತವ್ಯ ಎಂದು ಶಾಸಕ ಸೋಮಶೇಖರ್ ಹೇಳಿದರು.

ಮೈಸೂರಿನ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಜನಸ್ಪಂದನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಸೋಮಶೇಖರ್ ಅವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳು ಯಾವುದೇ ಕೆಲಸವನ್ನು ಮಾಡಬಹುದು. ಅವರು ಹೆಚ್ಚಿನ ವಿದ್ಯಾವಂತರೂ ಆಗಿರಬಹುದು. ಆದರೆ ಅವರಿಗೆ ಯಾವ ಮಾರ್ಗದಲ್ಲಿ ಹೋಗಬೇಕೆನ್ನುವುದು ತಿಳಿದಿರುವುದಿಲ್ಲ. ನಾವು ಅವರಿಗೆ ಮಾರ್ಗದರ್ಶನ ನೀಡಬೇಕು. ಜನಸ್ಪಂದನ ಟ್ರಸ್ಟ್ ಇದಕ್ಕಾಗಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ. 25000ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಾಮಾನ್ಯವಾರಿ ಹಬ್ಬ-ವಿಶೇಷ ದಿನಗಳಲ್ಲಿ ಗಿಫ್ಟ್ ನೀಡುತ್ತಾರೆ. ಆದರೆ ಉದ್ಯೋಗ ಮೇಳ ಏರ್ಪಡಿಸಿ ನಿಮ್ಮ ಜೀವನಕ್ಕೆ ಗಿಫ್ಟ್ ನೀಡಲಾಗಿದೆ. ಕೇವಲ ನೀವು ಮಾತ್ರ ಉದ್ಯೋಗ ಪಡೆದು ನೆಲೆ ನಿಂತರೆ ಸಾಲದು. ನಿರುದ್ಯೋಗಿಗಳಾಗಿರುವವರಿಗೂ ಮುಂದಿನ ದಿನಗಳಲ್ಲಿ ನೀವು ಸಹಾಯಹಸ್ತ ಚಾಚಬೇಕು. ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂದು ತಿಳಿಸಿದರು.

ಕೆಲವು ಉದ್ಯೋಗಾಕಾಂಕ್ಷಿಗಳ ಮಾಹಿತಿ ಪತ್ರವನ್ನು ಶಾಸಕರು ಸ್ವೀಕರಿಸಿ ಪರಿಶೀಲಿಸಿದರು. ಈ ಸಂದರ್ಭ ಮಹಾನಗರ ಪಾಲಿಕೆ ಸದಸ್ಯ ಜಗದೀಶ್, ಜನಸ್ಪಂದನ ಟ್ರಸ್ಟ್ ನ ಅಧ್ಯಕ್ಷ, ಉಪಾಧ್ಯಕ್ಷರು ಉಪಸ್ಥಿತರಿದ್ದರು.

ಇಂಜಿನಿಯರಿಂಗ್ ಪೂರೈಸಿ, ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗಾಗಿ ನಡೆಸಿದ ಉದ್ಯೋಗ ಮೇಳ ಇದಾಗಿದ್ದು, 500ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಉದ್ಯೋಗ ಮೇಳ ಭಾನುವಾರ ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ನಡೆಯಲಿದೆ.

Leave a Reply

comments

Related Articles

error: