
ಪ್ರಮುಖ ಸುದ್ದಿ
ಪೌರಕಾರ್ಮಿಕರ ಹಿತ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ: ನಾರಾಯಣಗೌಡ
ಪ್ರಮುಖ ಸುದ್ದಿ, ಕೆ.ಆರ್.ಪೇಟೆ, ಆ.೨೧: ಪೌರಕಾರ್ಮಿಕರಿಗೆ ಮೂಲ ಸೌಕರ್ಯ ಒದಗಿಸಿಕೊಡುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವ ಮೂಲಕ ಪೌರಕಾರ್ಮಿಕರ ಹಿತ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ಹೇಳಿದರು.
ಪಟ್ಟಣದ ೮ನೇ ವಾರ್ಡಿನ ಪೌರಕಾರ್ಮಿಕರ ಕಾಲೋನಿಯಲ್ಲಿ ಗೃಹಭಾಗ್ಯ ಯೋಜನೆಯಡಿಯಲ್ಲಿ ೫೦ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿವ ೬ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ ಪೌರಕಾರ್ಮಿಕರ ಪರಿಶ್ರಮ ಅಪಾರವಾಗಿದೆ. ಹಾಗಾಗಿ ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುವ ವೈದ್ಯರಿಗಿಂತಲೂ ಶ್ರೇಷ್ಠ ವ್ಯಕ್ತಿಗಳಾಗಿರುವ ಪೌರಕಾರ್ಮಿಕರನ್ನು ನಾವು ಅತ್ಯಂತ ಹೆಚ್ಚಿನ ರೀತಿಯ ಗೌರವ ನೀಡಿ ನೋಡಿಕೊಳ್ಳಬೇಕು. ಅವರು ನಾವು ಹೇಳುವುದಕ್ಕೆ ಮೊದಲೇ ಮುಂಜಾನೆಯೇ ಎದ್ದು ಪಟ್ಟಣವನ್ನು ಸ್ವಚ್ಛಗೊಳಿಸಿ ಸುಂದರಗೊಳಿಸುತ್ತಾರೆ. ಚರಂಡಿ ಸ್ವಚ್ಛತೆ ಮಾಡುವಾಗ ಕಡ್ಡಾಯವಾಗಿ ಕೈ ಮತ್ತು ಕಾಲುಗಳಿಗೆ ಸುರಕ್ಷಾ ಸಾಧನಗಳನ್ನು ಅಳವಡಿಸಿಕೊಳ್ಳಬೇಕು. ಸುರಕ್ಷಾ ಸಾಧನವಿಲ್ಲದೆ ಕೆಲಸ ಮಾಡಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ೮ನೇ ವಾರ್ಡಿನ ಪುರಸಭಾ ಸದಸ್ಯ ಕೆ.ಎಸ್.ಸಂತೋಷ್ಕುಮಾರ್, ಜಿ.ಪಂ ಸದಸ್ಯ ಹೆಚ್.ಟಿ.ಮಂಜು, ರಾಮದಾಸ್, ಪುರಸಭಾ ಸದಸ್ಯ ಕೆ.ಆರ್.ಹೇಮಂತ್ಕುಮಾರ್, ಡಿ.ಪ್ರೇಮಕುಮಾರ್, ಕೆ.ಪುರುಷೋತ್ತಮ್, ಕೆ.ಬಿ.ನಂದೀಶ್, ಕೆ.ಗೌಸ್ಖಾನ್, ದಿನೇಶ್, ನಾಗರಾಜು, ಪುರಸಭಾ ಮುಖ್ಯಾಧಿಕಾರಿ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)