ಮೈಸೂರು

ಗಿಡ ನೆಡುವ ಮೂಲಕ ಸ್ವಚ್ಛಗಾಳಿ ಅಭಿಯಾನಕ್ಕೆ ಚಾಲನೆ

ಜೆ.ಸಿ. ನಗರದ ಚಾಮುಂಡೇಶ್ವರಿ ದೇವಳದ ಸಮೀಪ ರಂಗಭೂಮಿ ಕಲಾವಿದ, ಹಿರಿತೆರೆ-ಕಿರುತೆರೆ ನಟ ಮಂಡ್ಯ ರಮೇಶ್ ಅವರು ಗಿಡ ನೆಟ್ಟು ಅದಕ್ಕೆ ನೀರುಣಿಸುವ ಮೂಲಕ “ಸ್ವಚ್ಛಗಾಳಿ” ಶೀರ್ಷಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಯುವ ಮೋರ್ಚಾ ಅಧ್ಯಕ್ಷ ಹೆಚ್.ಎಸ್. ಜಯಶಂಕರ್, ಮಾಜಿ ಸಚಿವ ಎಸ್.ಎ. ರಾಮದಾಸ್, ನಗರಪಾಲಿಕೆ ಸದಸ್ಯರಾದ ಜಗದೀಶ್, ಸ್ನೇಕ್ ಶ್ಯಾಂ, ಮತ್ತಿತರರು ಪಾಲ್ಗೊಂಡಿದ್ದರು.

ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಭಾರತೀಯ ಜನತಾ ಪಾರ್ಟಿಯು ರಾಜ್ಯಾದ್ಯಂತ “ಸ್ವಚ್ಛ ಕರ್ನಾಟಕ” ಶೀರ್ಷಿಕೆ ಅಡಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಪ್ರತಿ ತಿಂಗಳು ಒಂದನೇ ಹಾಗೂ ಮೂರನೇ ಭಾನುವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ಮೈಸೂರಿನ ಎಲ್ಲ ವಿಧಾನಸಭಾ ಕ್ಷೇತ್ರ ಮತ್ತು ವಾರ್ಡ್‍ಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ.

ಭಾನುವಾರ ಮೈಸೂರಿನ 65ನೇ ವಾರ್ಡ್ ನ ಜೆ.ಸಿ. ಲೇಔಟ್ ಮತ್ತು ಕೆ.ಸಿ. ಲೇಔಟ್ ಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ಒಣಕಸ, ಹಸಿಕಸವನ್ನು ಬೇರ್ಪಡಿಸುವುದು, ಫ್ಲೆಕ್ಸ್ ಮುಕ್ತ ನಗರವನ್ನಾಗಿಸುವುದು, ಗೋಡೆಗಳ ಮೇಲೆ ಭಿತ್ತಿಚಿತ್ರಗಳನ್ನು ಅಂಟಿಸಬಾರದೆಂದು ತಿಳಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಪ್ರತಿ ವಾರವೂ ವಿಭಿನ್ನ ಪರಿಕಲ್ಪನೆ ಮತ್ತು ಶೀರ್ಷಿಕೆಯೊಂದಿಗೆ ಸ್ಚಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಸ್ಚಚ್ಛ ವಾತಾವರಣ – ಫ್ಲೆಕ್ಸ್ ಮತ್ತು ಪೋಸ್ಟರ್ ಮುಕ್ತ ನಗರ, ಕಸ ವಿಲೇವಾರಿ.

ಸ್ಚಚ್ಛ ಕುಡಿಯುವ ನೀರು – ಕುಡಿಯಲು ಯೋಗ್ಯ ನೀರು ಸರಬರಾಜು ಮಾಡುವುದು.

ಸ್ಚಚ್ಛ ಗಾಳಿ – ಗಿಡ ನೆಡುವುದು, ವಾಯು ಮಾಲಿನ್ಯ ಮಾಡದಂತೆ ಅರಿವು ಮೂಡಿಸುವುದು.

ಸ್ಚಚ್ಛ ಮೊಬೈಲ್ – ಉಪಯೋಗ ಹಾಗೂ ದುರುಪಯೋಗಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು.

ಸ್ಚಚ್ಛ ಮನಸ್ಸು – ಆಲ್ಕೊಹಾಲ್-ಡ್ರಗ್ಸ್-ಜೂಜು ಮುಂತಾದ ದುಷ್ಚಟಗಳಿಂದಾಗುವ ಪರಿಣಾಮ ಕುರಿತು ಅರಿವು ಮೂಡಿಸುವುದು – ಇವು ಪಕ್ಷದ ವತಿಯಿಂದ ಪ್ರತಿವಾರ ಹಮ್ಮಿಕೊಂಡಿರುವ ವಿಭಿನ್ನ ಪರಿಕಲ್ಪನೆಯ ಕಾರ್ಯಕ್ರಮಗಳಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Leave a Reply

comments

Related Articles

error: