ಕರ್ನಾಟಕಮೈಸೂರು

ಒಕ್ಕಲಿಗರ ಸಂಘದ ಕಾರ್ಯಕಾರಿ ಮಂಡಳಿ ವಜಾಗೊಳಿಸಿ ಚುನಾವಣೆ ನಡೆಸಲು ಆಗ್ರಹ

ವಿದ್ಯಾರಣ್ಯಪುರಂ ಒಕ್ಕಲಿಗರ ಸಂಘದ ಕಾರ್ಯಕಾರಿ ಮಂಡಳಿ ಅನಧಿಕೃತವಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದರೂ ಕಾನೂನಿಗೆ ತಲೆ ಬಾಗದೆ ಸಂಘವು ಅಕ್ರಮವಾಗಿ ಕಾರ್ಯಚಟುವಟಿಕೆ ನಡೆಸುತ್ತಿದ್ದು ಈ ಕೂಡಲೇ ಕಾರ್ಯಕಾರಿ ಮಂಡಳಿಯನ್ನು ವಜಾಗೊಳಿಸಿ ಚುನಾವಣೆ ನಡೆಸಬೇಕು ಎಂದು ಸಂಘದ ಆಜೀವ ಸದಸ್ಯ ಎನ್. ಬೋಗಯ್ಯ ಆಗ್ರಹಿಸಿದ್ದಾರೆ.

ಅವರು, ಇಂದು (ಅ.23) ನಗರದ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಸುಮಾರು ಹದಿಮೂರು ಸಾವಿರ ಸದಸ್ಯ ಬಲವಿರುವ ಸಂಘದಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಚುನಾವಣೆ ಜರುಗದಂತೆ ಅಕ್ರಮವಾಗಿ ನಾಮ ನಿರ್ದೇಶನಗೊಳಿಸಿ ಅವಿರೋಧ ಆಯ್ಕೆ ಎಂದು ಸ್ವಯಂ ಘೋಷಿಸಿಕೊಂಡು ಸಂಘದ ಆಡಳಿತ ಮಂಡಳಿ ಅವ್ಯವಹಾರ ನಡೆಸುತ್ತಿದೆ. ಈ ಬಗ್ಗೆ ಧ್ವನಿ ಎತ್ತಿದವರ ಮೇಲೆ ಪ್ರಭಾವಿಗಳ ಒತ್ತಡ ಹೇರಿ ತಣ್ಣಗಾಗಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಸಂಘವು ಹಣದ ವ್ಯವಹಾರವನ್ನು ಮನಸೋ ಇಚ್ಛೆ ನಡೆಸುತ್ತಿದ್ದು, ವಾರ್ಷಿಕ ಲೆಕ್ಕಪತ್ರ ಮಂಡಿಸಿಲ್ಲ. ಹೀಗಿದ್ದಾಗ್ಯೂ ಸಂಘದಿಂದ ಮುಂಬರುವ ನವೆಂಬರ್ 8ರಂದು ಸರ್ವ ಸದಸ್ಯರ ಸಭೆ ಕರೆದಿರುವುದು ಅಸಾಂವಿಧಾನಕವಾಗಿದೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ನಿಯಮದಡಿ ಆಯ್ಕೆಯಾಗದ ಸಂಘದ ಹಾಲಿ ಅಧ್ಯಕ್ಷ ಮಹಾಲಿಂಗಪ್ಪ, ಉಪಾಧ್ಯಕ್ಷರುಗಳಾದ ಚಂದ್ರಶೇಖರ್ ಮತ್ತು ಮಾದೇಶ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಗೌಡ, ಸಹ ಕಾರ್ಯದರ್ಶಿ ಪಿ. ನಾಗರಾಜ, ಖಜಾಂಚಿ ಸಣ್ಣನಾಗೇಗೌಡ ಹಾಗೂ ಹದಿನಾಲ್ಕು ನಾಮನಿರ್ದೇಶಿತ ನಿರ್ದೇಶಕರ ಆಯ್ಕೆಯು ಅಸಿಂಧುವಾಗಿದ್ದು ಇವರುಗಳನ್ನು ವಜಾಗೊಳಿಸಿ, ಸಂಘದ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೆ ಚುನಾವಣೆ ನಡೆಸಬೇಕು ಎಂದು ಬೆಂಗಳೂರಿನ ಸಹಕಾರ ಸಂಘಗಳ ಅಪರ ನಿಬಂಧಕರು (ಬಳಕೆ ಮತ್ತು ಮಾರಾಟ) ಮತ್ತು ಸಂಘ ಸಂಸ್ಥೆಗಳ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಿದ್ದೇವೆ. ಈ ಅಕ್ರಮದ ವಿರುದ್ಧ ಮುಂಬರುವ ದಿನಗಳಲ್ಲಿ ಕಾನೂನು ಪ್ರಕಾರ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಚನಾ, ಶಂಕರಯ್ಯ, ಪದ್ಮಮ್ಮ ಉಪಸ್ಥಿತರಿದ್ದರು.

Leave a Reply

comments

Related Articles

error: