ಕರ್ನಾಟಕಪ್ರಮುಖ ಸುದ್ದಿ

ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ಗಾಂಭೀರ್ಯ ತಂದಿದೆ : ಕೆ.ಜೆ.ಜಾರ್ಜ್

ರಾಜ್ಯ(ಬೆಂಗಳೂರು)ಆ.21:- ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ಗಾಂಭೀರ್ಯ ತಂದಿದ್ದು, ಈ ಸಾರಿಗೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ನಗರದಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಹಿರಿಯ ಛಾಯಾಗ್ರಹಕ ಕೆ.ವೆಂಕಟೇಶ್ ಸೆರೆ ಹಿಡಿದಿರುವ ‘ನಮ್ಮ ಮೆಟ್ರೋ ಸುಂದರ, ವಿರೂಪ ಹಾಗೂ ಕುರೂಪ ಮುಖಗಳ’ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರತಿದಿನ ಮೂರು ಲಕ್ಷಕ್ಕೂ ಅಧಿಕ ಜನರು ಮೆಟ್ರೋ ಸಾರಿಗೆ ಬಳಕೆ ಮಾಡುತ್ತಿದ್ದಾರೆ ಎಂದರು. ಸಮಸ್ಯೆಗಳಿಂದ ಮುಕ್ತವಾದ ಮೆಟ್ರೋ, ಉದ್ಯಾನ ನಗರಿಯ ನಾಗರಿಕರಿಗೆ ಅವರ ಸಮಯ ಹಾಗೂ ಶಕ್ತಿಯನ್ನು ಉಳಿಸುವಂಥ ಸರಿಯಾದ ಸಮಯಕ್ಕೆ ತ್ವರಿತ ಗತಿಯ ಪ್ರಯಾಣವನ್ನು ಕಲ್ಪಿಸುತ್ತಿದೆ ಎಂದರಲ್ಲದೇ ಸಂಚಾರ ದಟ್ಟಣೆ ಹಾಗೂ ಖಾಸಗಿ ವಾಹನಗಳಿಂದ ಮುಕ್ತಿ ನೀಡಿದೆ ಎಂದು ಜಾರ್ಜ್ ಹೇಳಿದರು.
ಛಾಯಾಗ್ರಹಕ ಕೆ.ವೆಂಕಟೇಶ್ ಮೆಟ್ರೋ ಬಗ್ಗೆ ವಿಶೇಷವಾಗಿ ಸೆರೆ ಹಿಡಿದಿರುವ ಛಾಯಾಚಿತ್ರಗಳು ಎಲ್ಲರನ್ನು ಆಕರ್ಷಿಸುತ್ತಿವೆ. ವಿದ್ಯಾರ್ಥಿಗಳು, ಸಾರ್ವಜನಿಕರು ಈ ಪ್ರದರ್ಶನದಲ್ಲಿ ಪಾಲ್ಗೊಂಡು, ಮೆಟ್ರೋ ನಡೆದು ಬಂದ ಹಿನ್ನಲೆ ಬಗ್ಗೆ ತಿಳಿದುಕೊಳ್ಳಬಹುದೆಂದು ಸಲಹೆ ನೀಡಿದರು.
ಹಿರಿಯ ಛಾಯಾಗ್ರಹಕ ಕೆ.ವೆಂಕಟೇಶ್ ಮಾತನಾಡಿ, ಬೆಂಗಳೂರು ವಿಶೇಷ ನಗರವಾಗಿದ್ದು, ಮೆಟ್ರೋ ಸಾರಿಗೆ ಸುಂದರವಾಗಿದೆ. ಮೆಟ್ರೋ ಯೋಜನೆಯ ಸಾಹಸಗಾಥೆಯನ್ನು ನಿಬ್ಬೆರಗಾಗಿಸುವಂತೆ ವಿವರಿಸುವ ಅತ್ಯಂತ ಪ್ರಮುಖ ಚಿತ್ರಗಳು ಪ್ರದರ್ಶನದಲ್ಲಿ ನೋಡಬಹುದಾಗಿದೆ ಎಂದು ಮಾಹಿತಿ ನೀಡಿದರು. ನಮ್ಮ ಮೆಟ್ರೋ ದ ಅಪರೂಪದ ನೈಜವಾದ ಛಾಯಾಚಿತ್ರಗಳ ಪ್ರದರ್ಶನ ಇಂದಿನಿಂದ ಆ.25ವರೆಗೂ ನಡೆಯಲಿದ್ದು, ಮೆಟ್ರೋ ಬಗೆಗಿನ 50ಕ್ಕೂ ಹೆಚ್ಚಿನ ಛಾಯಾಚಿತ್ರಗಳಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: