ಪ್ರಮುಖ ಸುದ್ದಿ

ಬಂಡೀಪುರ ಅಭಯಾರಣ್ಯಕ್ಕೆ ಜೀವಕಳೆ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ ವನ್ಯ ಪ್ರಾಣಿಗಳು 

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಆ.೨೧: ಬಂಡೀಪುರ ಅಭಯಾರಣ್ಯ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹಸಿರು ತುಂಬಿಕೊಂಡು ಇಡೀ ಅರಣ್ಯವೇ ನಳನಳಿಸುತ್ತಿದ್ದು, ಅಲ್ಲಲ್ಲಿ ಕಾಣಸಿಗುವ ವನ್ಯಪ್ರಾಣಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಬಂಡೀಪುರ ಅರಣ್ಯದಲ್ಲಿ ಮಳೆಯಿಲ್ಲದೆ ಮರಗಿಡಗಳು ಒಣಗಿನಿಂತು ಪ್ರಕೃತಿ ಸೌಂದರ್ಯ ಸವಿಯಬೇಕೆಂಬ ಆಸೆಯಿಂದ ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿತ್ತು. ಅಲ್ಲದೆ ಆಹಾರವನ್ನರಿಸಿ ಪ್ರಾಣಿಗಳು ವಲಸೆ ಹೋಗಿದ್ದರಿಂದ ಸಫಾರಿ ಮಾಡುವವರು ಸಹ ನಿರಾಸೆಗೆ ಒಳಗಾಗುತ್ತಿದ್ದರು. ಆದರೀಗ ಉತ್ತಮ ಮಳೆಯಾಗುತ್ತಿರುವುದರಿಂದ ಕಾಡಿಗೆ ಜೀವಕಳೆ ಬಂದಿದ್ದು, ಪ್ರಾಣಿಗಳು ಸ್ವಸ್ಥಾನಕ್ಕೆ ವಾಪಸ್ಸಾಗಿವೆ. ಇದರಿಂದ ಪ್ರವಾಸಿಗರು ಕಾನನದ ಸುಂದರ ದೃಶ್ಯಗಳೊಂದಿಗೆ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.

ಬಂಡೀಪುರ ಅಭಯಾರಣ್ಯದಲ್ಲಿ ಕರ್ನಾಟಕದಲ್ಲಿಯೇ ೧೪೦ ಕ್ಕೂ ಹೆಚ್ಚು ಹುಲಿ, ಸಾವಿರಾರು ಆನೆ, ಚಿರತೆ, ಕರಡಿ, ಕಾಡೆಮ್ಮೆ, ಹೆಬ್ಬಾವು, ಅನೇಕ ಪ್ರಭೇದದ ಜಿಂಕೆಗಳು, ನವಿಲು, ಸೀಳು ನಾಯಿ ಸೇರಿದಂತೆ ಬಲು ಅಪರೂಪದ ಪಕ್ಷಿಗಳು ಕಾನನದ ಸೊಬಗನ್ನು ಹೆಚ್ಚಿಸುತ್ತಿವೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಪ್ರಾಣಿಗಳು ರಸದೌತಣ  ನೀಡುತ್ತಿದ್ದು ಅರಣ್ಯಕ್ಕೆ ಪ್ರವೇಶ ಮಾಡುವ ಹಾದಿಯಿಂದಲೆ ನೂರಾರು ಜಿಂಕೆಗಳು ನವಿಲುಗಳು ಸ್ವಾಗತಿಸುತ್ತಿವೆ. ಆನೆ, ಹುಲಿ, ಚಿರತೆಗಳು ಪ್ರವಾಸಿಗರಿಗೆ ಪ್ರವಾಸದ ಖುಷಿಯನ್ನು ಇಮ್ಮಡಿಗೊಳಿಸುತ್ತಿವೆ. ಬರದಿಂದ ಕಂಗೆಟ್ಟಿದ್ದ ಕಾನನವೀಗ ಹಸಿರಿನ ಹೊದಿಕೆಯನ್ನು ಹೊದ್ದುಕೊಂಡು ಸ್ವರ್ಗದಂತೆ ಬಾಸವಾಗುತ್ತಿದೆ. (ವರದಿ ಬಿ.ಎಂ)

 

Leave a Reply

comments

Related Articles

error: