ಕರ್ನಾಟಕಪ್ರಮುಖ ಸುದ್ದಿ

“ಬ್ಲೂವೇಲ್ ಚಾಲೆಂಜ್”- ಅರಿವು ಮೂಡಿಸಲು ಶಿಕ್ಷಣ ಅಧಿಕಾರಿಗಳಿಗೆ ಸಚಿವರ ಸೂಚನೆ

ಬೆಂಗಳೂರು, ಆಗಸ್ಟ್ 22 : “ಬ್ಲೂವೇಲ್ ಚಾಲೆಂಜ್” ಎಂಬ ಆನ್‍ಲೈನ್ ಗೇಮ್‍ನಿಂದಾಗಿ ಶಾಲಾ ಮತ್ತು ಕಾಲೇಜು ಮಕ್ಕಳು ಪ್ರಚೋದನೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಕಾಲೇಜುಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

ಇಲಾಖೆಯು ಈ ಕೂಡಲೇ ತ್ವರಿತಗತಿಯಲ್ಲಿ ಎಲ್ಲಾ ಉಪ ನಿರ್ದೇಶಕರುಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆಯನ್ನು ಹೊರಡಿಸಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಪಕ ಪ್ರಚಾರ ನೀಡಿ ಮಕ್ಕಳಿಗೆ ಅರಿವು ಮತ್ತು ಜಾಗ್ರತೆ ಮೂಡಿಸಲು ಹಾಗೂ ಅಂತರ್ಜಾಲ ತಾಣಗಳಲ್ಲಿ ಈ ರೀತಿಯ ಅನಾರೋಗ್ಯಕರ ಆಟಗಳಿಂದ ದೂರವಿರುವಂತೆ ಮತ್ತು ವೆಬ್‍ಸೈಟ್‍ಗಳನ್ನು ಬಳಕೆ ಮಾಡದಂತೆ ಮುಗ್ಧ  ಶಾಲಾ ಮಕ್ಕಳಿಗೆ ತಿಳಿಸುವುದು ಉಪ ನಿರ್ದೇಶಕರುಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರುಗಳು, ಶಿಕ್ಷಕರುಗಳು ಮತ್ತು ಪೋಷಕರ ಜವಾಬ್ದಾರಿಯಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಬಗ್ಗೆ ವ್ಯಾಪಕ ಪ್ರಚಾರವನನು ಹಮ್ಮಿಕೊಳ್ಳುವುದು, ಶಾಲೆಗಳಲ್ಲಿ ಮಕ್ಕಳಿಗೆ ಪ್ರತಿಧಿನ ತಿಳುವಳಿಕೆಯನ್ನು ನೀಡುವುದು ಹಾಗೂ ಸೈಬರ್ ಕೆಫೆ ಮತ್ತು ಅಂತರ್ಜಾಲ ತಾಣಗಳಿಂದ ಈ  ರೀತಿಯ ಅನಾರೋಗ್ಯಕರ ಚಟುವಟಿಕೆಗಳಿಂದ ದೂರವಿರುವಂತೆ ಮಕ್ಕಳಿಗೆ ತಿಳುವಳಿಕೆ ನೀಡುವುದು ಹಾಗೂ ಈ ಬಗ್ಗೆ ಪೋಷಕರುಗಳಲ್ಲಿಯೂ ಸಹ ಜಾಗೃತಿ ಮೂಡಿಸಲು ಆಂದೋಲವನ್ನು ರೂಪಿಸುವಂತೆ ಅವರು ಸೂಚಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯ ಸಹಕಾರ ಪಡೆಯುವಂತೆ ಹಾಗೂ ಈ ರೀತಿ ಅನಾರೋಗ್ಯಕರ ಅಂತರ್ಜಾಲ ತಾಣಗಳನ್ನು ನಿರ್ಬಂಧಿಸುವಂತೆ ರಾಜ್ಯ ಮತ್ತು ಕೇಂದ್ರ ಐ.ಟಿ. ಇಲಾಖೆಗಳಿಗೆ ಪತ್ರ ಬರೆಯುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.

-ಎನ್.ಬಿ.

Leave a Reply

comments

Related Articles

error: