ಕರ್ನಾಟಕ

ತ್ರಿವಳಿ ತಲಾಖ್ ವಿಚಾರ ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ: ಶೋಭಾ ಕರಂದ್ಲಾಜೆ

ಬೆಂಗಳೂರು,ಆ.22-ತ್ರಿವಳಿ ತಲಾಖ್ ಧರ್ಮ ಮತ್ತು ಸಂವಿಧಾನ ವಿರೋಧಿ ಎನ್ನುವುದನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಾನೂನು ರೂಪಿಸಲು ಹೇಳಿದೆ. ಮುಸ್ಲಿಂ ಮಹಿಳೆಯರ ಶಾಪ ವಿಮೋಚನೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 71 ವರ್ಷವಾದರೂ ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಅವರ ಜೀವನವೇ ನರಕವಾಗಿತ್ತು. ತಮ್ಮ ಭಾವನೆಗಳನ್ನು, ನೋವುಗಳನ್ನು ನುಂಗಿ ಬದುಕುವ ಅತ್ಯಂತ ಕ್ರೂರ ಕಾನೂನು ಮಹಿಳೆಯರ ಜೀವನಕ್ಕೆ ಸವಾಲಾಗಿತ್ತು. ಇದೀಗ 1400 ವರ್ಷಗಳ ಸಾಮಾಜಿಕ ಪಿಡುಗಿಗೆ ಪೂರ್ಣವಿರಾಮ ಬಿದ್ದಿದೆ ಎಂದಿದ್ದಾರೆ.

ಮೂರು ತಲಾಖ್ ನಿಂದ ಪತ್ನಿಯನ್ನು ಅನಾಥವಾಗಿ ಮಾಡುವ ಅಮಾನುಷ ಕಾನೂನು ಕೊನೆಗೂ ಅಂತ್ಯವಾಗಿದೆ. ದೇಶದ ಸುಪ್ರೀಂ ಕೋರ್ಟ್ ಈ ಐತಿಹಾಸಿಕ, ಚಾರಿತ್ರಿಕ ನಿರ್ಧಾರದಿಂದ ಇಡೀ ದೇಶದ 125 ಕೋಟಿ ಜನರ ಗೌರವವನ್ನು ಎತ್ತಿ ಹಿಡಿದಿದೆ. ಕೆಲವು ಮೂಲಭೂತವಾದಿ ಮುಸ್ಲಿಂರನ್ನು ಬಿಟ್ಟರೆ ನಾಗರೀಕ ಸಮಾಜ ಈ ರೀತಿಯ ವಿವಾಹ ವಿಚ್ಚೇದನವನ್ನು ಬೆಂಬಲಿಸಲು ಸಾಧ್ಯವಿಲ್ಲ. ಶತಮಾನಗಳಿಂದ ನಮ್ಮ ದೇಶದ ಮುಸಲ್ಮಾನ ತಾಯಂದಿರು ಆತಂಕದಿಂದ ಬದುಕುವ ಸ್ಥಿತಿಯಿತ್ತು. ಮದುವೆಯಾಗಿ ಮಕ್ಕಳಾದ ಮೇಲೂ ಬೀದಿಗೆ ಬೀಳುವ ಭಯವಿತ್ತು. ತ್ರಿವಳಿ ತಲಾಖ್ ಧರ್ಮ ಮತ್ತು ಸಂವಿಧಾನ ವಿರೋಧಿ ಎನ್ನುವುದನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಾನೂನು ಮಾಡಲು ಹೇಳಿದೆ. ಕೇಂದ್ರ ಸರ್ಕಾರ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ದೇಶದ ಎಲ್ಲಾ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಸುಪ್ರೀಂ ಕೋರ್ಟ್ ನ ಆದೇಶದಂತೆ 6 ತಿಂಗಳಲ್ಲಿ ಕಾನೂನು ಮಾಡಲು ನಾವೆಲ್ಲಾ ಸೇರಿ ಶಕ್ತಿ ತುಂಬಬೇಕು ಎಂದಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: