ಮೈಸೂರು

ರಾಜಕೀಯವಾಗಿ ಗುರುತಿಸಿಕೊಳ್ಳಲು ಜೆ.ಎಸ್.ಎಸ್. ಕಾರಣ: ಸಚಿವ ಎಚ್.ಎಸ್. ಮಹದೇವಪ್ರಸಾದ್

ನಾನು ರಾಜಕೀಯವಾಗಿ ಗುರುತಿಸಿಕೊಳ್ಳಲು ಕಾರಣ ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಹೇಳಿದರು.

ಭಾನುವಾರ ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ವಾಣಿಜ್ಯ ಮತ್ತು ಕಲಾ, ವಿಜ್ಞಾನ ಕಾಲೇಜಿನ ಸುವರ್ಣಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಉದ್ಘಾಟಿಸಿ ಹೆಚ್.ಎಸ್. ಮಹದೇವಪ್ರಸಾದ್ ಮಾತನಾಡಿದರು. ಸುತ್ತೂರು ಮಠದ ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಗಳು ದೂರದೃಷ್ಟಿಯುಳ್ಳವರಾಗಿದ್ದರು. ಅವರ ಅಂತಹ ವ್ಯಕ್ತಿತ್ವವೇ ಇಂದು ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರು ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು. ನಾನೂ ಸಹ ಪುಟ್ಟ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನನ್ನನ್ನು ನೋಡಿದ ಶ್ರೀಗಳು ತಮ್ಮ ಶಿಕ್ಷಣ ಸಂಸ್ಥೆಯಲ್ಲಿಯೇ ನನಗೆ ಓದಲು ಅವಕಾಶ ನೀಡಿದರು. ಅದರಿಂದ ನಾನು ಇಂದು ಮಂತ್ರಿಯಾಗಿ ಗುರುತಿಸಿಕೊಳ್ಳುವುದು ಸಾಧ್ಯವಾಯಿತು. ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗಾಗಿ ಅನ್ನ ದಾಸೋಹ, ಅಕ್ಷರ ದಾಸೋಹ ನಡೆಸಿ ಎಷ್ಟೋ ಜನರ ಏಳ್ಗೆಗೆ  ಶ್ರೀಗಳು ಕಾರಣರಾಗಿದ್ದಾರೆ ಎಂದರು. ಗ್ರಾಮೀಣ ಪ್ರದೇಶದ ಮಕ್ಕಳು ಮೈಸೂರಿಗೆ ಶಿಕ್ಷಣಕ್ಕಾಗಿ ಬರುತ್ತಿದ್ದರು. ಅವರಿಗಾಗಿಯೇ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರಲ್ಲದೇ ಕಾಲೇಜನ್ನು ತೆರೆದರು. ಈಗಲೂ ಸಹ ಎಷ್ಟೋ ಬಡ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಮಾಜಿ ಸಂಸದ ಹೆಚ್. ವಿಶ್ವನಾಥ ಮಾತನಾಡಿ ನನ್ನಲ್ಲಿರುವ ಬಹುಮುಖ ಪ್ರತಿಭೆಯನ್ನು ಹೊರತಂದಿದ್ದೇ ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆ. ಇಲ್ಲಿ ನಾನು ಕೇವಲ ಪದವಿಯನ್ನು ಮಾತ್ರ ಕಲಿಯಲಿಲ್ಲ. ಸಂಪೂರ್ಣ ಬದುಕನ್ನು ಜೀವಿಸುವುದು ಕಲಿತೆ. ಜಾತ್ಯಾತೀತತೆಯನ್ನು ಇಲ್ಲಿ ಎತ್ತಿ ಹಿಡಿಯಲಾಗುತ್ತಿದೆ ಎಂದರು. ಅಷ್ಟೇ ಅಲ್ಲದೇ ಹಾಡೊಂದನ್ನು ಹಾಡಿ ರಂಜಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಬೆಂಗಳೂರು ಸಂಸ್ಕೃತ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಶರತ್ಚಂದ್ರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: