Uncategorized

ಈ ಮಾರುಕಟ್ಟೆಯಲ್ಲಿ ರೈತರ ಗೋಳು ಕೇಳೋರಿಲ್ಲ.

ಮೈಸೂರು ‘ಸ್ವಚ್ಛ ನಗರಿ’ ಎಂದೇ ಎರಡು ಬಾರಿ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಆದರೆ ಇಲ್ಲಿನ ಮಹಾತ್ಮ ಗಾಂಧಿ ರಸ್ತೆಯ ಮಾರುಕಟ್ಟೆಯ ಸ್ಥಿತಿ ಗತಿ ನೋಡಿದರೆ, ಯಾರಪ್ಪ ಮೈಸೂರಿಗೆ ಪ್ರಶಸ್ತಿ ಕೊಟ್ಟೋರು ಅಂತ ಕೇಳೋದಂತೂ ನಿಜ. ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಮೈಸೂರಿನಲ್ಲಿ ಇಂತಹ ಅವ್ಯವಸ್ಥೆಯೇ…? ಎಂದು ಕೇಳ್ತಿರಾ.. ಹೌದು, ಈ ಮಾರುಕಟ್ಟೆ ಸೇರಿದಂತೆ ಅದರ ಸುತ್ತಮುತ್ತ ಎಲ್ಲೆಂದರಲ್ಲಿ ಕಸದ ರಾಶಿ, ಕೊಳಕು, ಕೆಟ್ಟವಾಸನೆ. ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡದೇ ಬೇಜವಾಬ್ದಾರಿಯಿಂದ ವರ್ತಿಸುವ ಸುಂಕ ವಸೂಲಿದಾರರು. ಈ ಮಧ್ಯೆ ನಮಗೆ ಈ ಮಾರುಕಟ್ಟೆಯೇ ಗತಿ ಎಂದು ದೂರದೂರಿನಿಂದ ಬರುವ ರೈತರ ಸಮಸ್ಯೆಗಳಿಗೇನೂ ಇಲ್ಲಿ ಕಡಿಮೆ ಇಲ್ಲ.

ಗನ್ ಹೌಸ್ ಮಾರುಕಟ್ಟೆ, ಎಂ.ಜಿ.ರೋಡ್ ಮಾರುಕಟ್ಟೆ ಎಂದೇ ಹೆಸರು ಪಡೆದಿರುವ ಈ ಮಾರುಕಟ್ಟೆ ಮುಖ್ಯವಾಗಿ ರೈತರ ಕೇಂದ್ರಬಿಂದು. ಮುಂಜಾನೆ 3 ಗಂಟೆಯಿಂದ ಪ್ರಾರಂಭವಾಗುವ ವ್ಯಾಪಾರ ಮುಗಿಯುವುದು ಸಂಜೆ 7 ಗಂಟೆಗೆ.  ಅಕ್ಕ ಪಕ್ಕದ ಗ್ರಾಮದ ರೈತರು ತಾವು ಬೆಳೆದ ತರಕಾರಿಗಳನ್ನು ನೇರವಾಗಿ ತಂದು ಇಲ್ಲಿ ಮಾರಾಟ ಮಾಡುತ್ತಾರೆ.   ತಮಗೆ ಲಾಭ ಸಿಗುತ್ತದೋ ಇಲ್ಲವೋ ಒಟ್ಟಿನಲ್ಲಿ ಅಂದು ತಂದ ತರಕಾರಿಗಳನ್ನು ಅರ್ಧ ಬೆಲೆಗಾದರೂ ಅಂದೇ ಮಾರಾಟ ಮಾಡಿ ಹೋಗುವ ಪರಿಪಾಠ ಇವರದ್ದು. ಹೀಗೆ ಅರ್ಧ ಬೆಲೆಗೆ ಮಾರಾಟ ಮಾಡುವುದರಿಂದ ನಿಮಗೆ ಸಿಗುವ ಲಾಭವಾದರೂ ಏನು? ಎಂದು ಕೇಳಿದರೆ “ ಮತ್ತೆ ವಾಪಸ್ಸು ತೆಗೆದುಕೊಂಡು ಹೋಗಿ ನಾಳೆ ತಂದು ಮಾರಾಟ ಮಾಡುವ ಬದಲು ಇವತ್ತೇ ಅರ್ಧ ಬೆಲೆಗೆ ಮಾರಾಟ ಮಾಡಿದರೆ ಡೀಸೆಲ್ ಖರ್ಚಾದರೂ ಮಿಗುತ್ತದೆ” ಎಂಬ ಲೆಕ್ಕಾಚಾರದಲ್ಲಿ ಮಾತನಾಡುತ್ತಾರೆ.

ಇಲ್ಲಿ ವ್ಯಾಪಾರಸ್ಥರಿಗೆ ಒಂದು ನ್ಯಾಯ. ರೈತರಿಗೆ ಒಂದು ನ್ಯಾಯ. ಇಲ್ಲಿಯ ಅವ್ಯವಸ್ಥೆ ನೋಡಿದರೆ ಎಂತಹವರಿಗೂ ಇದು ಯಾವ ನ್ಯಾಯ..? ಅನ್ನಿಸುತ್ತದೆ. ರೈತರು ಕಷ್ಟಪಟ್ಟು ಬೆಳೆದ ತರಕಾರಿಗಳನ್ನು ಚಿಲ್ಲರೆ ವ್ಯಾಪಾರಿಗಳು ಕಡಿಮೆ ಬೆಲೆಗೆ ಖರೀದಿಸಿ ದುಪ್ಪಟ್ಟು ಬೆಲೆಗೆ ಮಾರಿ ಅಧಿಕ ಲಾಭ ಗಳಿಸುತ್ತಾರೆ. ರೈತರಿಗೆ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಇಂತಹ ದುಸ್ಥಿತಿಯಲ್ಲಿ ನೇರ ಮಾರುಕಟ್ಟೆ ದೊರೆತಿದ್ದರೂ ಸಹ ಅಲ್ಲಿನ ಸಮಸ್ಯೆಗಳ ಸಾಗರ ನೋಡಿದರೆ ಸಾಕಪ್ಪಾ.. ಸಾಕು ಎಂದು ಹೇಳುವ ರೈತರ ಆ ನೋವು  ಮಾತ್ರ ನಿಜಕ್ಕೂ ಶೋಚನೀಯ.

“ನಾವು ರೈತರು. ದೂರದ ಊರುಗಳಿಂದ ಬಂದು  ಬೆಳೆದ ತರಕಾರಿಗಳನ್ನು ಸಿಕ್ಕ ಬೆಲೆಗೆ  ಮಾರಾಟ ಮಾಡಿ ಬಂದಷ್ಟು ಲಾಭ ತೆಗೆದುಕೊಂಡು ಹೋಗ್ತೀವಿ. ನಮಗೆ ಇಲ್ಲಿ ಸರಿಯಾದ ಸೌಲಭ್ಯಗಳಿಲ್ಲ. ಸ್ವಚ್ಛತೆಯಂತೂ ಮೊದಲೇ ಇಲ್ಲ.ಚಿಲ್ಲರೆ ವ್ಯಾಪಾರಸ್ಥರು ಮಾರಾಟ ಮಾಡುವ ಸ್ಥಳವನ್ನು ಪ್ರತಿದಿನ ಸ್ವಚ್ಛ ಮಾಡ್ತಾರೆ. ಆದರೆ ಇಲ್ಲಿ ವಾರಕ್ಕೆ ಎರಡು ಬಾರಿ ಸ್ವಚ್ಛ ಮಾಡೋದೇ ಹೆಚ್ಚು. ಅದಕ್ಕೆ ಅಂತಾನೇ ಸಂಘದವರು ಪ್ರತಿದಿನ ನಮ್ಮಿಂದ 5 ರೂ. ಸುಂಕ ವಸೂಲಿ ಮಾಡ್ತಾರೆ. ಆದರೆ ಸ್ವಚ್ಛ ಮಾತ್ರ ಮಾಡಲ್ಲ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ವಾಹನಗಳು ದಟ್ಟಣೆ ಹೆಚ್ಚಾದಂತೆ ನಮಗೆ ವ್ಯಾಪಾರ ಮಾಡಲು ತುಂಬಾ ಕಷ್ಟವಾಗುತ್ತದೆ. ಬೆಳಗಿನ ಸಮಯದಲ್ಲಿ ಈ ಸಮಸ್ಯೆ ಹೆಚ್ಚು. ದಣಿವಾದಾಗ ಕುಡಿಯಲು ನೀರಿನ ಸೌಲಭ್ಯ ಇಲ್ಲ. ಎಳನೀರು ಕುಡಿದು ದಾಹ ಇಂಗಿಸಿಕೊಳ್ಳೋಣ ಅಂದ್ರೆ ಸಂಘದವರು ಯಾವ ವ್ಯಾಪಾರಿಗಳನ್ನು ಮಾರುಕಟ್ಟೆಯ ಒಳಗೆ ಬಿಡೋದಿಲ್ಲ. ನೆಮ್ಮದಿಯಾಗಿ ಹೊಟ್ಟೆ ತುಂಬಾ ಊಟ ಮಾಡೊ ಭಾಗ್ಯ ಅಂತೂ ಇಲ್ಲ. ಇರೋದೊಂದೇ  ಚಿಕ್ಕ ಹೋಟೆಲ್. ಅಲ್ಲಿ ಏನು ಸಿಗುತ್ತೋ ಅದನ್ನೇ ತಿನ್ನಬೇಕು ವಿಧಿಯಿಲ್ಲ. ಮಳೆಗಾಲದಲ್ಲಂತೂ ಇಲ್ಲಿ ಕಾಲಿಡೋಕೆ ಸಾಧ್ಯ ಇಲ್ಲ. ಅಷ್ಟು ಗಲೀಜಿನಿಂದ ಕೂಡಿರುತ್ತದೆ. ಬಿಸಿಲು ಮಳೆ ಎನ್ನದೇ ವ್ಯಾಪಾರ ಮಾಡ್ತೀವಿ. ಮಳೆ ಬಂದಾಗ ತರಕಾರಿಗಳು ನೆನೆಯುತ್ತವೆ. ಅದಕ್ಕೆ ಸ್ವಂತ ಟಾರ್ಪಲ್ ಹಾಕೊಂಡಿದೀವಿ. ಸರಿಯಾದ ಸೂರಿನ ವ್ಯವಸ್ಥೆ ಇಲ್ಲ. ಅಲ್ಲದೇ ರಾತ್ರಿ ವೇಳೆ ಎಷ್ಟೋ ರೈತರು ಇಲ್ಲೇ ತಂಗುತ್ತಾರೆ. ಮಳೆ ಬಂದಾಗ ತುಂಬಾ ಕಷ್ಟ ಆಗುತ್ತೆ. ಹಸುಗಳ ಹಾವಳಿಯಂತೂ ಹೆಚ್ಚಾಗಿದೆ. ಈ ಅವ್ಯವಸ್ಥೆ ಕುರಿತು ಕೇಳೋರಿಲ್ಲ” ಅಂತ ತಮ್ಮ ಗೋಳು ತೋಡಿಕೊಳ್ಳುತ್ತಾರೆ.

 

“ಸುಪ್ರೀಂ ಕೋರ್ಟ್ ನಲ್ಲಿ ಈ ಜಾಗಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಖಾಸಗಿ ಅವರ ನಡುವೆ ಕೇಸ್ ನಡೆಯುತ್ತಿದೆ. ಅದರ ಸ್ಪಷ್ಟ ತೀರ್ಪು ಬರುವವರೆಗೂ ಮಾರುಕಟ್ಟೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತಿಲ್ಲ. ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಕೋರ್ಟ್ ಆದೇಶಿಸಿದೆ”.

“ಇಟ್ಟಿಗೆಗೂಡು ವಾರ್ಡ್ ನಲ್ಲಿ 25 ಮಂದಿ ಪೌರ ಕಾರ್ಮಿಕರಿದ್ದಾರೆ. ಮಾರುಕಟ್ಟೆ ಸ್ವಚ್ಛತೆ ಮಾಡಲು ಹೊಸದಾಗಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಇದರ ಬಗ್ಗೆ ಮೇಯರ್ ಬಳಿ ಮಾತನಾಡಿ ಶೀಘ್ರ ಕ್ರಮ ಕೈಗೊಳ್ಳುತ್ತೇವೆ”.

  • ವನಿತಾ ಪ್ರಸನ್ನ, ಕಾರ್ಪೋರೇಟರ್, ಇಟ್ಟಿಗೆಗೂಡು 65 ನೇ ವಾರ್ಡ್

 

ಲತಾ ಸಿ.ಜಿ      

Leave a Reply

comments

Related Articles

error: