ಮೈಸೂರುಸಿಟಿ ವಿಶೇಷ

ವಾಲಿಕೊಂಡಿದ್ದ ಮನೆ ಕೆಡವಲು ಒಪ್ಪಿಗೆ: ಪಾಲಿಕೆ ಅಧಿಕಾರಿಗಳ ಮಾತಿಗೆ ಮಾಲೀಕರ ಸ್ಪಂದನೆ

img-20161022-wa0035ನಿಯಮಾವಳಿಗಳನ್ನು ಮೀರಿ ಮನೆ ನಿರ್ಮಾಣ ಮಾಡಿರುವಾಗ ಅದನ್ನ ಕೆಡವಿ ಹಾಕ್ಬೇಕು ಅಂತ ಅಧಿಕಾರಿಗಳು ಬಂದ್ರೆ, ಮನೆ ಮಾಲೀಕರು ದೊಡ್ಡ ಡ್ರಾಮಾವನ್ನೇ ಮಾಡ್ತಾರೆ. ಇಂತಹ ಡ್ರಾಮಾ ಮಾಡೋ ಜನರ ಮಧ್ಯೆ, ನಿಮ್ಮ ಮನೆ ಸರಿಯಾದ ಕ್ರಮದಲ್ಲಿ ಕಟ್ಟಿಲ್ಲ. ನಿಮ್ಮ ಮನೆ ಇನ್ನೇನೂ ಕುಸಿದು ಬೀಳಲಿದೆ. ನಿಮ್ಮ ಪ್ರಾಣ ಇದ್ದರೆ ಈ ರೀತಿ ಮತ್ತೇರಡು ಮನೆ ಕಟ್ಟಬಹುದು ಎಂಬ ಅಧಿಕಾರಿಗಳ ಮಾತಿಗೆ ಸ್ಪಂದಿಸಿದ ಕುಟುಂಬವೊಂದು, ಒಂದೇ ದಿನದಲ್ಲಿ ಮನೆ ಖಾಲಿ ಮಾಡಿ ಅಧಿಕಾರಿಗಳ ಸಮ್ಮುಖದಲ್ಲೇ ಮನೆ ಕೆಡವಲು ಸಿದ್ದವಾಗಿರುವ ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಸುಣ್ಣದಕೇರಿಯಲ್ಲಿರುವ ಗಾಯಿತ್ರಿ ಎಂಬುವವರ ಮನೆ 13 ಅಡಿ ಉದ್ದ, 13 ಅಡಿ ಅಗಲ ಹೊಂದಿದೆ. ಇದರಲ್ಲಿ ಹೆಚ್ಚು ಅಂದರೆ ಎರಡು ಅಂತಸ್ತಿನ ಮನೆ ಕಟ್ಟಬೇಕು. ಆದರೆ ಗಾಯತ್ರಿ ಅವರಿಗೆ ಇಬ್ಬರು ಗಂಡು ಮಕ್ಕಳಿರುವ ಕಾರಣ 12 ಲಕ್ಷ ವೆಚ್ಚ ಮಾಡಿ ನಾಲ್ಕು ಅಂತಸ್ತಿನ ಮನೆ ಕಟ್ಟಿಸಿದ್ದಾರೆ. ನಾಲ್ಕು ವರ್ಷದ ಹಿಂದೆ ಕಟ್ಟಿಸಿದ ಈ ಮನೆ ಇದೀಗ ಶೇ. 10 ರಷ್ಟು ಎಡಭಾಗಕ್ಕೆ ವಾಲಿಕೊಂಡಿದೆ. ಆದರೂ ಮನೆಯವರು ನಾಲ್ಕನೆ ಮಹಡಿಯನ್ನು ಬಾಡಿಗೆ ನೀಡಿ ಮೂರನೇ ಮಹಡಿಯವರೆಗೆ ಮನೆಯವರೇ ವಾಸವಾಗಿದ್ದಾರೆ. ಲಕ್ಷಾಂತರ ರೂ. ವ್ಯಯಿಸಿ ಕಟ್ಟಿರುವ ಮನೆಯನ್ನು ಕೆಡವಲು ಮನಸ್ಸಿಲ್ಲದಿದ್ದರೂ ಯಾವಾಗ ಬೇಕಾದರೂ ಕುಸಿದು ಬೀಳಬಹುದಾದ ಸಾಧ್ಯತೆ ಇರುವುದರಿಂದ ಮನೆ ಕೆಡವಲು ಮನೆ ಮಾಲೀಕರು ತಕರಾರಿಲ್ಲದೇ ಸಿದ್ದರಾಗಿದ್ದಾರೆ.

ಮನೆ ಕುಸಿದು ಬೀಳುವ ಮುನ್ನ ಪರಿಶೀಲನೆ ಮಾಡಿದ್ದೇ ಈ ಆಪತ್ಭಾಂದವ…

ಒಮ್ಮೊಮ್ಮೆ ನಮಗೆ ತಿಳಿಯದೇ ಎಷ್ಟೋ ಒಳ್ಳೆಯ ಕೆಲಸಗಳೂ ಆಗ್ತವೆ. ಅದರಲ್ಲಿ ಒಂದು, ದೇವರಾಜ ಮಾರುಕಟ್ಟೆ ಕುಸಿದು ಬೀಳುವ ಅರ್ಧ ಗಂಟೆ ಮುಂಚಿತವಾಗಿ ಮೈಸೂರು ಪಾಲಿಕೆಯ ಸಹಾಯಕ ಇಂಜಿನಿಯರ್ ರವಿಕುಮಾರ್ ಅವರೇ ಮಾರುಕಟ್ಟೆ ಕುಸಿದು ಬೀಳುವ ಮುನ್ಸೂಚನೆ ನೀಡಿದ್ದರು. ಆ ವೇಳೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಸುಣ್ಣದಕೇರಿಯ ಈ ಮನೆಯೂ ಕುಸಿದು ಬೀಳುವ ಸುಳಿವು ಸಿಕ್ಕಿದ್ದು ರವಿಕುಮಾರ್ ಅವರ ತಪಾಸಣೆ ವೇಳೆಯೇ. ಮನೆಯನ್ನು ಗಮನಿಸಿದ ರವಿಕುಮಾರ್, ಈ ವಿಷಯವನ್ನು ಹಿರಿಯ ಅಧಿಕಾರಿಗಳು, ಪಾಲಿಕೆ ಸದಸ್ಯ ಹಾಗೂ ಶಾಸಕ ಸೋಮಶೇಖರ್ ಅವರ ಗಮನಕ್ಕೆ ತಂದಿದ್ದಾರೆ. ನಂತರ ನೋಟಿಸ್ ಕೊಟ್ಟು ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮಾತ್ರವಲ್ಲ ಮನೆಯವರಿಗೆ ಸಮಾಧಾನವಾಗಿ ಈ ಬಗ್ಗೆ ತಿಳಿಹೇಳಿದ್ದಾರೆ.

img-20161022-wa0033ಒಂದೇ ದಿನದಲ್ಲಿ ಖಾಲಿಯಾಯ್ತು ಮನೆ…

ರವಿಕುಮಾರ್ ಮಾತಿಗೆ ಸ್ಪಂದಿಸಿದ ಮನೆ ಮಾಲೀಕರು ಕೂಡಲೇ ರಾತ್ರೋರಾತ್ರಿ ಮನೆಯನ್ನು ಖಾಲಿ ಮಾಡಿದ್ದಾರೆ. ಈ ವೇಳೆ ಸ್ಥಳೀಯರೊಬ್ಬರು ಹೆಂಗಸರು-ಮಕ್ಕಳು ಇದ್ದ ಕಾರಣ ಇವರಿಗೆ ಉಳಿದುಕೊಳ್ಳಲು ಮನೆ ನೀಡಿದ್ದಾರೆ. ಮಾತ್ರವಲ್ಲ ಸ್ಥಳೀಯರೆಲ್ಲರೂ ಇವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇದೀಗ ಶಾಸಕ ಸೋಮಶೇಖರ್ ಅವರನ್ನು ಭೇಟಿ ಮಾಡಿ ಮನೆ ಕೆಡವುತ್ತಿರುವ ಹಿನ್ನಲೆಯಲ್ಲಿ ಸರ್ಕಾರದಿಂದ ಪುನರ್ವಸತಿ ಯೋಜನೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಶಾಸಕರು ಕೂಡ ಸ್ಪಂದಿಸಿದ್ದು ಸರ್ಕಾರದ ಯೋಜನೆಯಲ್ಲಿ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

img-20161022-wa0040

ಈ ವೇಳೆ ‘ಸಿಟಿಟುಡೆ’ಯೊಂದಿಗೆ ಮಾತನಾಡಿದ ಮನೆಯ ಹಿರಿಯ ಮಗ ಲೋಕೇಶ್ ಅವರು, “ಅಧಿಕಾರಿಗಳ ಮಾತು ನಿಜ. ಹಾಗೊಮ್ಮೆ ಸಮಸ್ಯೆಯಾಗಿದ್ದರೆ ನಮ್ಮ ಪ್ರಾಣ ಸೇರಿದಂತೆ ಅಕ್ಕ-ಪಕ್ಕದ ಮನೆಯವರ ಪ್ರಾಣ ಕಳೆದುಕೊಳ್ಳುವ ಆತಂಕವಿತ್ತು. ಇದೀಗ ಅಧಿಕಾರಿಗಳ ಸಮ್ಮುಖದಲ್ಲೇ ನಾವೇ ಈ ಮನೆ ನಿರ್ಮಾಣ ಮಾಡಿದ ಮೇಸ್ತ್ರಿ ವತಿಯಿಂದಲೇ ಮನೆ ಕೆಡವಲು ಸಿದ್ದರಾಗಿದ್ದೇವೆ. ಇಂಜಿನಿಯರ್ ರವಿಕುಮಾರ್ ಅವರೇ ಮನೆಯ ಸಮಸ್ಯೆ ಕುರಿತು ವಿವರಿಸಿ ನಮಗೆ ಬುದ್ಧಿವಾದ ಹೇಳಿದರು. ಅವರಿಗೂ ಧನ್ಯವಾದ. ಆದರೆ ಪಾಲಿಕೆ ವತಿಯಿಂದ ನಮಗೆ ಏನಾದರು ಸಣ್ಣ-ಪುಟ್ಟ ಅನುದಾನ ಸಿಕ್ಕರೆ ಅನುಕೂಲವಾಗುತ್ತದೆ” ಎಂದಿದ್ದಾರೆ.

ಒಟ್ಟಾರೆ, ಕೆಟ್ಟ ಮೇಲೆ ನಮ್ಮ ಮಂದಿಗೆ ಬುದ್ಧಿ ಬರುತ್ತೆ. ಆದರೆ, ಮೈಸೂರಿನ ಈ ಕುಟುಂಬ ಅಧಿಕಾರಿಗಳ ಮಾತಿಗೆ ಸ್ಪಂದಿಸಿ ತಂಟೆ-ತಕರಾರಿಲ್ಲದೆ ಮನೆ ಕೆಡವಲು ಮುಂದಾಗಿರೋದು ಮಾತ್ರ ಇತರರಿಗೆ ಒಂದು ಪಾಠವೇ ಹೌದು.

-ಸುರೇಶ್ ಎನ್.

Leave a Reply

comments

Related Articles

error: