ಕರ್ನಾಟಕ

ಗಣೇಶೋತ್ಸವದಲ್ಲಿ ಡಿಜೆ, ಮದ್ಯಪಾನ ಬೇಡ : ಹಿಂದೂ ಜನಜಾಗೃತಿ ಸಮಿತಿ ಮನವಿ

ಮಡಿಕೇರಿ ಆ.22 :  ಸುಮಾರು 170 ವರ್ಷಗಳ ಹಿಂದೆ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಸಮಾಜವನ್ನು ಸಂಘಟಿಸುವುದು, ರಾಷ್ಟ್ರ ರಕ್ಷಣೆ, ಪಾಶ್ಚಾತ್ಯ ಸಂಸ್ಕøತಿಯಂತಹ ಅಂಧಾನುಕರಣೆಯ ವಿರುದ್ಧ ಮತ್ತು ಧರ್ಮಜಾಗೃತಿಯ ಉದ್ದೇಶಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವ ಸಮಿತಿಗಳು ಈ ಉದ್ದೇಶವನ್ನು ಸಂಪೂರ್ಣವಾಗಿ ಮರೆತಿವೆ ಎಂದು ಹಿಂದೂ ಜನಜಾಗೃತಿ ಸಮಿತಿ ಬೇಸರ ವ್ಯಕ್ತಡಿಸಿದೆ.

ಒತ್ತಾಯ ಪೂರ್ವಕವಾಗಿ ಹಣವನ್ನು ಸಂಗ್ರಹಿಸುವುದು, ಚಿತ್ರ-ವಿಚಿತ್ರ ರೂಪದ ಶಾಸ್ತ್ರ, ಸಮ್ಮತವಲ್ಲದ ಗಣೇಶ ಮೂರ್ತಿಗಳು, ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳು, ಮಂಟಪದಲ್ಲಿ ಅಭಿರುಚಿ ರಹಿತ, ಸಿನೆಮಾ, ಪಾಶ್ಚಾತ್ಯ, ಅಸಭ್ಯ ಕಾರ್ಯಕ್ರಮಗಳು, ಮೆರವಣಿಗೆಯಲ್ಲಿ ಕರ್ಣ ಕರ್ಕಶ ಡಿಜೆ, ಆರ್ಕೆಷ್ಟ್ರಾ, ಅಸಭ್ಯ ನೃತ್ಯ, ಮದ್ಯಪಾನ ಮಾಡುವುದು, ಸ್ತ್ರೀಯರೊಂದಿಗೆ ಅಸಭ್ಯ ವರ್ತನೆ, ಮಂಟಪದಲ್ಲಿ ಜೂಜಾಟ, ಗುಟ್ಕಾ, ತಂಬಾಕುಗಳ ಜಾಹೀರಾತುಗಳು ಇವೇ ಮೊದಲಾದ ಅಯೋಗ್ಯ ಆಚರಣೆಗಳು ಉತ್ಸವದ ಹೆಸರಿನಲ್ಲಿ ನುಸುಳಿ ಉತ್ಸವದ ಮೂಲ ಉದ್ದೇಶ ನಾಶವಾಗುತ್ತಿದೆ ಎಂದು ಸಮಿತಿಯ ಪ್ರಮುಖರಾದ ಪಾರ್ವತಿ ಗಣಪತಿ ಅಭಿಪ್ರಾಯಪಟ್ಟಿದ್ದಾರೆ.  ಯಾವುದೇ ಉತ್ಸವದ ಪಾವಿತ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದೂವಿನ ಧರ್ಮ ಕರ್ತವ್ಯವಾಗಿದೆ. ಈ ಕಾರಣದಿಂದ ಹಿಂದೂ ಜನಜಾಗೃತಿ ಸಮಿತಿ ಸ್ವಧರ್ಮದ ಗೌರವ ಕಾಪಾಡಲು ಮತ್ತು ಹಿಂದೂ ಸಮಾಜಕ್ಕೆ ಅದರ ಪ್ರಯೋಜನವಾಗಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವ ಜನಜಾಗೃತಿ ಅಭಿಯಾನವನ್ನು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಜನರಿಗೆ ತೊಂದರೆಯಾಗುವ ರೀತಿ ಗಣೇಶ ಮಂಟಪ ಪ್ರತಿಷ್ಠಾಪನೆ ಬದಲು ಗ್ರಾಮೀಣ ಪ್ರದೇಶದಲ್ಲಿ ‘ಊರಿಗೊಂದು ಗಣಪತಿ’, ಅದೇ ರೀತಿ ನಗರ ಪ್ರದೇಶದಲ್ಲಿ ವಾರ್ಡಿಗೊಂದು ಗಣಪತಿ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುವುದು ಸೂಕ್ತ. ಗಣೇಶ ತತ್ವದ ಲಾಭವನ್ನು ಪಡೆಯಲು ಧರ್ಮಶಾಸ್ತ್ರದಂತೆ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವುದು, ಕೃತಕ ಬಣ್ಣದ ಬದಲು ನೈಸರ್ಗಿಕ ಬಣ್ಣದ ಬಳಕೆ ಮಾಡುವುದು, ಮಂಟಪದಲ್ಲಿ ಧರ್ಮಜಾಗೃತಿ ಕಾರ್ಯಕ್ರಮಗಳು, ಭಜನೆ, ಅಥರ್ವಶೀರ್ಷ ಪಠಣ, ಧರ್ಮ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ನಡೆಸುವುದು, ನ್ಯಾಯಯುತವಾಗಿ ಹಣ ಸಂಗ್ರಹ ಮಾಡುವುದು, ಸಂಗ್ರಹಿಸಿದ ಹಣವನ್ನು ಧಾರ್ಮಿಕ ವಿಧಿವಿಧಾನಗಳಿಗೆ ಸಧ್ವಿನಿಯೋಗ ಮಾಡುವುದು, ಉಳಿದ ಹಣವನ್ನು ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೆ ನೀಡುವುದು, ಶಿಸ್ತು ಬದ್ಧ, ಭಕ್ತಿ ಪೂರ್ವಕ, ಸಮಯಪಾಲನೆ ಮಾಡುವಂತಹ ಮೆರವಣಿಗೆಗಳು ಇವೇ ಮುಂತಾದ ಲೋಕಮಾನ್ಯ ತಿಲಕರ ಸಾರ್ವಜನಿಕ ಗಣೇಶೋತ್ಸವದ ಮೂಲ ಉದ್ದೇಶವನ್ನು ಎಲ್ಲರೂ ಪರಿಪಾಲಿಸಬೇಕಾಗಿದೆ. ಎಲ್ಲಾ ಗಣೇಶೋತ್ಸವ ಸಮಿತಿಗಳು ಈ ಕ್ರಮಗಳನ್ನು ಅನುಸರಿಸುವ ಮೂಲಕ ಗಣೇಶೋತ್ಸವವನ್ನು ಅರ್ಥಪೂರ್ಣಗೊಳಿಸಬೇಕೆಂದು ಮನವಿ ಮಾಡಿರುವ ಪಾರ್ವತಿ ಗಣಪತಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಸುಮಾರು 11 ಗಣೇಶೋತ್ಸವ ಸಮಿತಿಗಳಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. (ವರದಿ: ಕೆಸಿಐ, ಎಲ್.ಜಿ)
 

Leave a Reply

comments

Related Articles

error: