ಕರ್ನಾಟಕ

ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು : ಐತಿಚಂಡ ರಮೇಶ್ ಉತ್ತಪ್ಪ ಸಲಹೆ

ಮಡಿಕೇರಿ ಆ.22 : ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆ ಓದುವುದು ಹಾಗೂ ದೃಶ್ಯ ಮಾಧ್ಯಮದಲ್ಲಿ ಬರುವ ಸುದ್ದಿ ವೀಕ್ಷಿಸುವುದನ್ನು ರೂಢಿಸಿಕೊಳ್ಳಬೇಕೆಂದು ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಕರೆ ನೀಡಿದರು. ಕೊಡಗು ಪ್ರೆಸ್ ಕ್ಲಬ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಎಫ್‍ಎಂಸಿ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಲಾಗಿರುವ ಸರಣಿ ಮಾಧ್ಯಮ ಸಂವಾದದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದರು. ಬರಹ ಕೌಶಲ್ಯ ವಿಷಯಕ್ಕೆ ಸಂಬಂಧಿಸಿದಂತೆ ಕುರಿತು ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ನೀಡಿದರು.

ಪತ್ರಿಕೆ ಓದು ವುದು, ಟಿವಿಯಲ್ಲಿ ಪ್ರಸಾರವಾಗುವ ಸುದ್ದಿ ವೀಕ್ಷಿಸುವುದು, ಸಾಮಾಜಿಕ ಜಾಲತಾಣಗಳಲ್ಲಿನ ವಿವಿಧ ವೆಬ್‍ಸೈಟ್‍ನಲ್ಲಿರುವ ಮಾಹಿತಿಯನ್ನು ಗಮನಿಸುವುದರ ಮೂಲಕ ಅಪ್‍ಡೆಟ್ ಆಗ ಬೇಕೆಂದರು. ಮುದ್ರಣ, ದೃಶ್ಯ, ಆಕಾಶವಾಣಿ, ಡಾಟ್ ಕಾಮ್/ ವೆಬ್‍ಸೈಟ್‍ನಲ್ಲಿ ಕಾರ್ಯನಿರ್ವಹಿಸಲು ಬಯಸುವವರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪತ್ರಿಕೆ ಓದದಿರುವುದಕ್ಕೆ ಮತ್ತು ಟಿವಿಯಲ್ಲಿ ಪ್ರಸಾರವಾಗುವ ಸುದ್ದಿ ಗಮನಿಸದಿರುವುದಕ್ಕೆ ನೆಪ ಹೇಳಬಾರದು. ವಿವಿಧ ಮೂಲಗಳಿಂದ ಸಿಗುವ ಮಾಹಿತಿ ಪಡೆದುಕೊಳ್ಳುವುದರ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬಹುದೆಂದರು.  ಬರಹ ಕೌಶಲ್ಯ ಬೆಳೆಸಿಕೊಳ್ಳಲು ಹಲವು ಸಿದ್ಧತೆ ಮಾಡಿಕೊಳ್ಳಬೇಕು. ಇಂಗ್ಲೀಷ್, ಕನ್ನಡ ಭಾಷಾ ಜ್ಞಾನ ಬೆಳೆಸಿಕೊಳ್ಳಬೇಕು. ಹೊಸ, ಹೊಸ ಪದ ತಿಳಿದುಕೊಳ್ಳುವ ಪ್ರಯತ್ನದ ಭಾಗವಾಗಿ ಪ್ರತಿನಿತ್ಯ ಐದು ಹೊಸ ಪದ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಸರಿ, ತಪ್ಪಿಗೆ ಸಂಬಂಧಿಸಿದಂತೆ ಸಣ್ಣ ಪುಸ್ತಕದಲ್ಲಿ ನೋಟ್ ಮಾಡಿಟ್ಟುಕೊಳ್ಳಬೇಕು. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಶೇಷ ವರದಿಗಳ ಕಟ್ಟಿಂಗ್ ಇಟ್ಟುಕೊಳ್ಳಬೇಕು. ಒಳ್ಳೆಯ ಬರಹಗಳನ್ನು ಪುಸ್ತಕದಲ್ಲಿ ದಾಖಲಿಸಿಟ್ಟುಕೊಳ್ಳಬೇಕೆಂದು ರಮೇಶ್ ಉತ್ತಪ್ಪ ಸಲಹೆ ನೀಡಿದರು.

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಇಳೆಯರಾಜ, ಮೋನಿಕಾ ಮತ್ತಿತರರು ಉಪಸ್ಥಿತರಿದ್ದರು. (ವರದಿ: ಕೆಸಿಐ, ಎಲ್.ಜಿ)
 

Leave a Reply

comments

Related Articles

error: