ಕರ್ನಾಟಕಪ್ರಮುಖ ಸುದ್ದಿಮೈಸೂರು

ಜನಸಾಮಾನ್ಯರಿಗೆ ಅಗತ್ಯ ಜೀವಜಲ ಒದಗಿಸಲು ಒತ್ತಾಯಿಸಿ ಪರಿಸರವಾದಿ ಮೈಸೂರುಮಠ ಪತ್ರ

ಮೈಸೂರು, ಆಗಸ್ಟ್ 23 : ಇತ್ತೀಚಿನ ದಿನಗಳಲ್ಲಿ ಕುಡಿಯಲು ಮತ್ತು ದಿನಬಳಕೆಗೆ ಶುದ್ಧ ನೀರು ಸಿಗುವುದೇ ದುಸ್ತರವಾಗಿದ್ದು, ಜನಸಾಮಾನ್ಯರು ನೀರಿಗಾಗಿ ಪರದಾಡುವಂತಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದೊಂದು ದಿನ ತೀವ್ರ ಜಲಕ್ಷಾಮ ಎದುರಿಸಬೇಕಾದ ಸಂದರ್ಭ ಬರುವುದರಲ್ಲಿ ಸಂಶಯವೇ ಇಲ್ಲ.  ಪರಿಸರವಾದಿ ವಸಂತಕುಮಾರ್ ಮೈಸೂರುಮಠ ಅವರು ಈ ವಿಷಯವಾಗಿ ಸರ್ಕಾರದ ಗಮನ ಸೆಳೆಯಲು ಪತ್ರ ಬರೆದಿದ್ದ, ತಮ್ಮ ಅನಿಸಿಕೆ ಮತ್ತು ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ನೀರು ಉಳಿಸಿ ಬಳಸುವ ಬಗ್ಗೆ ಹಲವಾರು ವಿಷಯಗಳನ್ನು ಹಂದಿಕೊಂಡಿದ್ದಾರೆ. ಅವರ ಪತ್ರದ ಯಥಾರೂಪ ಇಲ್ಲಿದೆ :

ಇಂದಿರಾ ಕ್ಯಾಂಟೀನ್‍ಗಳ ಮೂಲಕ ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ, ದುರ್ಬಲ ವರ್ಗದವರಿಗೆ ಮತ್ತು ಜನಸಾಮಾನ್ಯರಿಗೆ ಕಡಿಮೆ ದರಗಳಲ್ಲಿ ನಾಷ್ಟಾ, ಊಟ ಕೊಟ್ಟು ಪ್ರಶಂಸೆಗೆ ಪಾತ್ರರಾಗಿರುವ ಮುಖ್ಯಮಂತ್ರಿಗಳು ಅಂತೆಯೇ ಅದೇ ವರ್ಗಗಳ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಜೀವಜಲವಾದ ಕುಡಿಯುವ ಮತ್ತು ಅಡುಗೆಗೆ ಬೇಕಾಗುವಷ್ಟು ಸ್ವಚ್ಛ ನೀರನ್ನೂ ಸಹ ಇಂದಿರಾ ಕ್ಯಾಂಟೀನ್ ಗಳ ಅಥವಾ ಪಡಿತರ ಅಂಗಡಿಗಳ ಮೂಲಕ ನಿಗದಿತ ಬೆಲೆಯಲ್ಲಿ ಸರಬರಾಜು ಮಾಡುವ ಒಂದು ಸುಂದರ ಸುವ್ಯವಸ್ಥೆ ಮಾಡಿದರೆ ಒಳಿತು ಅನಿಸಿದೆ.

ಕಾರಣಗಳಿವೆ :

ಇತ್ತೀಚಿನ ವರದಿಗಳ ಪ್ರಕಾರ ಕಾವೇರಿ ನೀರೂ ಸಹ ಮಲಿನವಾಗಿದೆ, ನೇರವಾಗಿ ಕುಡಿಯಲು ಯೋಗ್ಯವಲ್ಲ. ಬೋರ್‍ವೆಲ್ ನೀರೂ ಅತಿಯಾದ ಲವಣಗಳ ಮಿಶ್ರಣವಾಗಿರುತ್ತದೆ ಎನ್ನುವುದು ಎಲ್ಲರ ಗಮನಕ್ಕೆ ಬಂದಿದೆ. ಸಾಮಾನ್ಯ ಜನರೂ ಸಹ ನೀರಿನ ಮೂಲಕ ರವಾನೆಯಾಗುವ ಖಾಯಿಲೆ ಕಸಾಲೆಗಳಿಗೆ ಹೆದರಿ ದುಬಾರಿ ಬಾಟಲಿ ನೀರನ್ನು ಉಪಯೋಗಿಸುತ್ತಿರುವುದು ಒಂದು ದುರಂತವೇ ಹೌದು. ಆ ಬಾಟಲಿ ನೀರು ಸ್ವಚ್ಚವೋ ಅಲ್ಲವೋ ಎನ್ನುವುದನ್ನು ಯಾರೂ ಪರೀಕ್ಷೆಗೆ ಒಳಪಡಿಸುವಷ್ಟು ವ್ಯವಧಾನವಿಲ್ಲದೆ ಕುರುಡು ನಂಬಿಕೆಯಿಂದ ಕುಡಿಯುತ್ತಿರುವುದೂ ಒಂದು ದುರಾದೃಷ್ಟ.

ಪಾಲಿಕೆಯ ಆರೋಗ್ಯಾಧಿಕಾರಿಗಳು ಆಗಿಂದಾಗ್ಯೆ ಹಲವಾರು ರೋಗರುಜಿನಗಳು ನೀರಿನ ಮೂಲಕವೇ ರವಾನೆ ಆಗುತ್ತಿವೆ ಮತ್ತು ಸರಬರಾಜಾಗುತ್ತಿರುವ ಅಥವಾ ಯಾವ ನೀರೇ ಆಗಲಿ ಅದನ್ನು ಕುದಿಸಿ, ಆರಿಸಿ ಕುಡಿಯಲಿಕ್ಕೆ/ಅಡುಗೆಗೆ ಉಪಯೋಗಿಸಿ ಎನ್ನುವ ಸಲಹೆ-ಎಚ್ಚರಿಕೆಯನ್ನು ಕೊಡುತ್ತಲೇ ಇದ್ದಾರೆ. ಅವರ ಅಮೂಲ್ಯ ಸಲಹೆಯನ್ನು ಅನುಷ್ಠಾನಕ್ಕೆ ತರಲು ಅಂದರೆ ನಿತ್ಯ ಜೀವನದಲ್ಲಿ  ಕುಡಿಯುಲು ಮತ್ತು ಅಡುಗೆಗೆ ಬೇಕಾಗುವಷ್ಟು ನೀರನ್ನು ಕುದಿಸಲು ಅಡುಗೆ ಅನಿಲವೇ ಆಧಾರ ; ಇದೇನು ಪುಕ್ಕಟೆ ಬರುವುದಿಲ್ಲ ಅಲ್ಲವೇ? ಇದರಿಂದ ಬಡ ಬಗ್ಗರಿಗೆ ಮತ್ತು ಜನ ಸಾಮಾನ್ಯರಿಗೆ ಅಡುಗೆಗೆ ಅನಿಲದ  ಕಡಿತ ಉಂಟಾಗುವುದರಲ್ಲಿ ಸಂಶಯವಿಲ್ಲ. ಉಳ್ಳವರು ಬಾಟಲ್ ನೀರು ಕೊಳ್ಳುವರು ಆದರೆ ಬಡವರು ಏನುಮಾಡಬೇಕು ಮುಖ್ಯಮಂತ್ರಿ ಅಯ್ಯ?

ಸಲಹೆ:

ಒಂದು ದಿನದಲ್ಲಿ ಒಬ್ಬ ಮನುಷ್ಯ ಹೆಚ್ಚು ಅಂದರೆ ೨-೩ ಲೀಟರ್ ನೀರನ್ನು ಕುಡಿಯಬಹುದು ಮತ್ತು ೪ ಜನ ಇರುವ ಸಂಸಾರ ಸುಮಾರು ೧೭ ಲೀಟರ್ ನೀರನ್ನು ಅಡುಗೆ ಮಾಡಲಿಕ್ಕೆ ಉಪಯೋಗಿಸಬಹುವು ಅಂದರೆ ಒಟ್ಟಾರೆ ಸುಮಾರು ೨೦ ಲೀಟರ್ ಸ್ವಚ್ಛ ಮತ್ತು ಶುಭ್ರ ನೀರನ್ನು ಉಪಯೋಗಿಸುವುದರಿಂದ ಸಾಮಾನ್ಯ ಜನರು ಆರೋಗ್ಯವಂತರಾಗಿ ಬಾಳಬಹುದು ಅಲ್ಲವೇ? ಆದುದರಿಂದ ತಾವು ಸ್ವಚ್ಛ ಮತ್ತು ಶುಭ್ರವಾದ ೨೦ ಲೀಟರ್ ನಷ್ಟು ನೀರನ್ನು ಎಷ್ಟು ಕಡಿಮೆ ದರದಲ್ಲಿ ಸರಬರಾಜು ಮಾಡಲು ಆಗುವುದೋ ಅಷ್ಟನ್ನು ಇಂದಿರಾ ಕ್ಯಾಂಟೀನ್ ಅಥವಾ ಪಡಿತರ ಅಂಗಡಿಗಳ ಮೂಲಕ ಜನ ಸಾಮಾನ್ಯರಿಗೆ ತಲುಪುವ ಸುವ್ಯವಸ್ಥೆ ಮಾಡಿದರೆ ಒಳ್ಳೆಯದು. 

ಮೇಲಿನ ಸಲಹೆಯು ಸರ್ಕಾರದಲ್ಲಿ ಇಂದಿಗೂ ಇರುವ ‘ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ಧ್ಯೇಯ ಮತ್ತು ಸಿಟಿಜೆ಼ನ್ ಚಾರ್ಟರ್‍ಗಳ ಮೇಲೆ ಅವಲಂಬಿಸಿದೆ. ಇದರ ಪ್ರಕಾರ ಸ್ಟೇಕ್ ಹೋಲ್ಡರ್‍ಗಳಿಗೆ (ಕುಡುಕರಿಗೆ) ನಿರಂತರವಾದ ತೃಪ್ತಿಕರ ಸೇವೆ ಮತ್ತು ಸುಧಾರಿತ ವಿತರಣಾ ವ್ಯವಸ್ಥೆಯನ್ನು ಒದಗಿಸುವುದು, ಸಾಮಗ್ರಿಗಳ ನಿರ್ವಹಣೆಯಲ್ಲಿ ಉತ್ತಮ ಪದ್ದತಿಗಳ ಅಳವಡಿಕೆ ಮತ್ತು ಮಳಿಗೆಗಳಲ್ಲಿ ಉತ್ತಮ ಮಟ್ಟದ ದಾಸ್ತಾನನ್ನು ಮಾತ್ರ ಇಡುವುದು, ಮಾರಾಟದ ಹಾದಿಯನ್ನು ಅಂತಿಮ ಗ್ರಾಹಕರ ದೃಷ್ಟಿಯಿಂದ ಮರಿಣಾಮಕಾರಿಯಾಗಿ ನಿರ್ವಹಿಸುವುದು, ಇತ್ಯಾದಿ. ಪೂರ್ಣ ಮಾಹಿತಿಯನ್ನು ಅಂತರ್ಜಾಲ ತಾಣದ ಈ ವಿಳಾಸದಲ್ಲಿ ನೋಡಬಹುದು : http://www.ksbcl.com/Citizen_Charter_july_12.pdf

ಮೇಲ್ಕಂಡ ಸಲಹೆಯನ್ನು ಅನುಷ್ಠಾನಗೊಳಿಸಲು ಮೀನ-ಮೇಷ ಬೇಕಿಲ್ಲ. ಏಕೆಂದರೆ ಸರ್ಕಾರವು ತನ್ನದೇ ಆದ ಮೇಲ್ಕಂಡ ಕುಂಪಣಿಯನ್ನು ಕುಂದುಕೊರತೆಗಳಿಲ್ಲದಂತೆ ಲಾಭದಾಯಕವಾಗಿ ನಡೆಸಿಕೊಂಡು ಬರುತ್ತಿದೆ. ಕುಡಿಯುವ ನೀರು ಜೀವ ಜಲ ಮತ್ತು ಕುಡಿತದ ಪಾನೀಯಗಳಿಗಿಂತಲೂ ವಿಶಿಷ್ಟವಾದ ಮಾನ್ಯತೆ ಪಡೆಯಬೇಕು. ಒಟ್ಟಾರೆಯಾಗಿ ಕುಡಿಯುವ ಮತ್ತು ಅಡುಗೆಯ ನೀರನ್ನು ಜನ ಸಾಮಾನ್ಯರಿಗೆ ಒದಗಿಸುವ ವ್ಯವಸ್ಥೆ ಇಂದಿನ ದಿನಗಳಲ್ಲಿ ಅತಿ ಮುಖ್ಯ ಮತ್ತು ಹೀಗೆ ಮಾಡಿದರೆ ಖಂಡಿತವಾಗಿ ಜನರ ಆಶೀರ್ವಾದ ನಿಮ್ಮ ಮೇಲೆ ದುಪ್ಪಟ್ಟು ಆಗುವುದರಲ್ಲಿ ಸಂಶಯವಿಲ್ಲ.

– ವಸಂತಕುಮಾರ್ ಮೈಸೂರುಮಠ,  ಪರಿಸರವಾದಿ, ೩೮೩೫/೩, ೨ನೇ ಅಡ್ಡ ರಸ್ತೆ,
ಯು.ಕೆ. ರಸ್ತೆ, ತಿಲಕ್ ನಗರ, ಮಂಡಿ ಮೊಹಲ್ಲಾ, ಮೈಸೂರು -೧

Leave a Reply

comments

Related Articles

error: