ಮೈಸೂರು

ಶ್ರೀಗಳ ವಿರುದ್ಧ ಷಡ್ಯಂತ್ರ: ಬ್ರಾಹ್ಮಣ ವೇದಿಕೆ ವತಿಯಿಂದ ಪ್ರತಿಭಟನೆ

ವಿವಿಧ ಬ್ರಾಹ್ಮಣ ಮಠಗಳ ಶ್ರೀಗಳ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರಗಳನ್ನು ಖಂಡಿಸಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಲಾಯಿತು.

ಭಾನುವಾರ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ವೇದಿಕೆಯ ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಬ್ರಾಹ್ಮಣ ಸಮುದಾಯವನ್ನು ಪದೇಪದೇ ನಿಂದಿಸಲಾಗುತ್ತಿದ್ದು ವ್ಯವಸ್ಥಿತ ತೇಜೋವಧೆ ನಡೆಯುತ್ತಿದೆ. ಸರ್ಕಾರ ಇದರ ಬಗ್ಗೆ ಪ್ರತಿಕ್ರಿಯೆ ನೀಡದಿರುವುದು ಸಂಶಯ ಮೂಡಿಸುತ್ತಿದೆ. ಶತ ಶತಮಾನಗಳಿಂದಲು ಉಡುಪಿ ಮಠ ತನ್ನದೇ ಆದ ಸೇವಾ ವೈಶಿಷ್ಟ್ಯದ ಮೂಲಕ ಸಮಾಜದ ಆಗುಹೋಗುಗಳನ್ನು ಸುಧಾರಿಸುತ್ತಾ ಬಂದಿದೆ. ಪ್ರತಿನಿತ್ಯ ಅನ್ನದಾಸೋಹ, ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರದ ಮೂಲಕ ಧರ್ಮದ ಹಕ್ಕನ್ನು ಪ್ರತಿಪಾದಿಸುತ್ತಿದ್ದು ಸರ್ವಧರ್ಮರು ಇದನ್ನು ಒಪ್ಪಿದ್ದಾರೆ. ಗಂಗಾ ನದಿ ಶುದ್ಧೀಕರಣದ ವಿಚಾರವಾಗಿ ಪ್ರಧಾನಮಂತ್ರಿಗಳೇ ಪೇಜಾವರ ಶ್ರೀಗಳ ಸಲಹೆ ಸ್ವೀಕರಿಸಿರುವುದು ಕರ್ನಾಟಕದ ಹಿರಿಮೆಯಾಗಿದೆ ಎಂದರು.

ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಉಡುಪಿ ರಾಮಚಂದ್ರಾಪುರ ಮಠ, ಮೈಸೂರಿನ ಚಾಮುಂಡಿ ಬೆಟ್ಟ, ಹಿಂದೂ ದೇವಾಲಯ, ಮಠಗಳ ವಿರುದ್ಧ ಪ್ರಗತಿಪರರ ಹೆಸರಿನಲ್ಲಿ ನಡೆಯುತ್ತಿರುವ ಷಡ್ಯಂತ್ರಗಳು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ವಾತಾವರಣ ನಿರ್ಮಾಣ ಮಾಡುತ್ತಿದೆ. ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಂತಹಂತವಾಗಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ ಪ್ರಕಾಶ್, ವಾಸುದೇವ್ ಭಟ್, ಪಾಲಿಕೆ ಸದಸ್ಯ ಮಾ.ವಿ. ರಾಂಪ್ರಸಾದ್, ಹೆಚ್.ಎನ್. ಶ್ರೀಧರಮೂರ್ತಿ, ಶ್ರೀಕಂಠಕುಮಾರ್, ಕೆ. ರಘುರಾಂ, ಬಾಲಕೃಷ್ಣ, ಜೆ. ರಮೇಶ್, ವಿಕ್ರಂ, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ವಿನಯ್, ಜಯಸಿಂಹ, ಜಗದೀಶ್, ಅರವಿಂದ್ ಶರ್ಮ, ಚಂದ್ರಶೇಖರ್, ದೀಪಕ್, ರಂಗನಾಥ್, ಸುರೇಶ್, ಜ್ಯೋತಿ, ಕಾಂತಮ್ಮ, ಮಂಜುನಾಥ್, ಬ್ರಹ್ಮಣ್ಯ ತೀರ್ಥ, ಮಾಧುರಾವ್, ಶ್ರೀನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

comments

Related Articles

error: