ಮೈಸೂರು

ಸೋಲು, ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿ: ಶ್ಯಾಮಲಾ 

ಮೈಸೂರು, ಆ.೨೩: ಕ್ರೀಡೆಯಿಂದ ಬುದ್ಧಿಶಕ್ತಿ, ಸಾಮರ್ಥ್ಯ ಸಮತೋಲನದಲ್ಲಿದ್ದು, ಪ್ರತಿನಿತ್ಯವೂ ವಿದ್ಯಾರ್ಥಿಗಳು ಆಟೋಟಗಳಲ್ಲಿ ತೊಡಗುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗುತ್ತದೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ವಿದ್ಯಾರ್ಥಿಗಳಿಗೆ ಶ್ಯಾಮಲಾ ಕಿವಿಮಾತು ಹೇಳಿದರು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಒಂದು ದಿನ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ರೀಡೆ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದರ ಜೊತೆಗೆ ಧ್ಯಾನ, ಯೋಗ ಎಲ್ಲವನ್ನೂ ವಿದ್ಯಾರ್ಥಿ ದೆಸೆಯಲ್ಲಿ ಅಳವಡಿಸಿಕೊಂಡಾಗ ಸ್ಥಿರವಾದ ಹಾಗೂ ಸಮತೋಲನವಾದ ಮನಸ್ಸನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಸೋಲು, ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿ ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಳೆದ ವರ್ಷ ಮೈಸೂರ್ ಸೆಂಟ್ರಲ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಮೈಸೂರು ವಿ.ವಿ ಓವೆಲ್ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿದ್ದರು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಯೋಗವೂ ಇರುತ್ತದೆ ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೇಳಿದರು.

ಕ್ರೀಡಾಕೂಟದಲ್ಲಿ ಮೈಸೂರು ತಾಲೂಕಿನಿಂದ ಒಟ್ಟು ೩೦೦ ಮಂದಿ ವಿದ್ಯಾರ್ಥಿಗಳು, ೨೦೦ ಮಂದಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಕು.ರೀನಾ ಜಾರ್ಜ್ ಬಲೂನುಗಳನ್ನು ಹಾರಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಎಂ.ಪುಟ್ಟು, ಮೈಸೂರ್ ಸೆಂಟ್ರಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಎ.ಎಚ್.ಗೋಪಾಲಕೃಷ್ಣ, ಪ್ರಾಂಶುಪಾಲೆ ಡಿ.ಬಿ.ಲತಾ, ಟ್ರಸ್ಟಿ ಪಿ.ಎಸ್.ಪ್ರಸಾದ್ ಮುಂತಾದವರು ಭಾಗವಹಿಸಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: