ಪ್ರಮುಖ ಸುದ್ದಿಮೈಸೂರು

ಜೆಎಸ್ಎಸ್ ಸಂಸ್ಥೆಯು ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ: ಯದುವೀರ ಒಡೆಯರ್

ಮೈಸೂರು ಮಹಾರಾಜರು ಆರೋಗ್ಯ ಹಾಗೂ ಶಿಕ್ಷಣಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅದೇ ರೀತಿ ಜೆಎಸ್ಎಸ್ ಸಂಸ್ಥೆಯು ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಒಡೆಯರ್ ವಂಶಸ್ಥ ಮಾಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಭಿಪ್ರಾಯಪಟ್ಟರು.

ಮೈಸೂರಿನ ಶಿವರಾತ್ರಿ ನಗರದಲ್ಲಿರುವ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಉತ್ಸವ ತತ್ವಂ-2016, ನಾಲ್ಕುದಿನಗಳ ಕಾಲ ನಡೆದ ಅಂತರ್ ಕಾಲೇಜು ಫೆಸ್ಟ್ ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೈಸೂರು ಒಡೆಯರ ಕಾಲದಿಂದಲೂ ಇಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ಜೆ.ಎಸ್.ಎಸ್ ಸಂಸ್ಥೆಯೂ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ತನ್ನದೇ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಮೈಸೂರು ಈಗಾಗಲೇ ಸ್ವಚ್ಛ ನಗರಿ ಎಂದು ಗುರುತಿಸಿಕೊಂಡಿದ್ದು, ಪ್ರಶಸ್ತಿಯನ್ನು ಪಡೆದಿದೆ. ಇಷ್ಟಕ್ಕೇ ಮುಗಿಯಲಿಲ್ಲ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಆ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಜೆ.ಎಸ್.ಎಸ್.ವೈದ್ಯಕೀಯ ಕಾಲೇಜಿನ ಸಾಮರ್ಥ್ಯ ಸಂಚಿಕೆಯನ್ನು ಯದುವೀರ ಒಡೆಯರ್ ಅವರ ಧರ್ಮಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಅವರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಜೆ.ಎಸ್.ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಬಿ.ಜಿ. ಸಂಗಮೇಶ್ವರ, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರುಮಠ, ಆಸ್ಪತ್ರೆಯ ನಿರ್ದೇಶಕ ಡಾ. ಎಂ.ಡಿ. ರವಿ ಮತ್ತಿತರರು ಉಪಸ್ಥಿತರಿದ್ದರು.

ಜೆ.ಎಸ್.ಎಸ್. ವೈದ್ಯಕೀಯ ಕಾಲೇಜಿಗೆ ಸಮಗ್ರ ಪ್ರಶಸ್ತಿ ಲಭಿಸಿದ್ದು, ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು ರೇಡಿಯಾಲಜಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಸಚಿನ್ ಅವರು ತಮ್ಮದಾಗಿಸಿಕೊಂಡರು. ಆವರಣದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ ನಡೆಯಿತು.

Leave a Reply

comments

Related Articles

error: