ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಾವೇರಿ, ತುಂಗಭದ್ರಾಗೆ ಸಮುದ್ರದ ನೀರು ಪೂರೈಸಲು ಸಲಹೆ : ಸಿ.ಎಂ.ಗೆ ಮಾಜಿ ಸಚಿವ ವಿಜಯಶಂಕರ್ ಪತ್ರ

ಮೈಸೂರು,ಆ.23 :  ಮಳೆ ನೀರಿಗಾಗಿಯೇ ಆಶ್ರಯಿಸುವ ಬದಲು ಸಮುದ್ರದ ನೀರನ್ನು ಶುದ್ಧೀಕರಿಸಿ ಪ್ರಾಯೋಗಿಕವಾಗಿ ಜಲಾಶಯಗಳಿಗೆ ಭರ್ತಿ ಮಾಡಿ ನೀರಿನ ಬವಣೆಯನ್ನು ನೀಗಿಸಬೇಕು. ಈ ಮೂಲಕ ನಾಡಿನ ರೈತರ ಮತ್ತು ನಾಗರಿಕರ ಹಿತ ಕಾಪಾಡಬೇಕು ಹಾಗೂ ನದಿನೀರು ವಿಷಯವಾಗಿ ದೀರ್ಘಕಾಲೀನ ಹಿತಾಸಕ್ತಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿ ಮಾಜಿ ಅರಣ್ಯ ಸಚಿವ ಸಿ.ಹೆಚ್.ವಿಜಯಶಂಕರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿಯೂ ಸಾಕಷ್ಟು ಸಮುದ್ರ ತೀರಗಳು ಲಭ್ಯವಿದ್ದು ನೀರಿನ ಕೊರತೆ ನೀಗಿಸಲು ಮಳೆಗಾಗಿ ಕಾಯುವ ಪರಿಸ್ಥಿತಿಯಿಂದ ರೈತರನ್ನು ಮುಕ್ತಗೊಳಿಸಲು ಪ್ರಾಯೋಗಿಕವಾಗಿ ರಾಜ್ಯದ ಪ್ರಮುಖ ಜಲಾಶಯಗಳಾದ ಕಾವೇರಿ ಮತ್ತು ತುಂಗಭದ್ರಾ ಇವೆರಡಕ್ಕೂ ಸಮುದ್ರದಿಂದ ಶುದ್ಧೀಕರಿಸಿದ ನೀರನ್ನು ತಂದು ಜೋಡಿಸುವುದು ಸದ್ಯಕ್ಕೆ ಪರಿಣಾಮಕಾರಿ ಪರ್ಯಾಯ ಮಾರ್ಗವೆಂದು ಪತ್ರದಲ್ಲಿ ವಿವರಿಸಿದ್ದಾರೆ. ಅಲ್ಲದೇ ಈಗಾಗಲೇ ನೆರೆಯ ತಮಿಳುನಾಡಿನ ರಾಜಧಾನಿ ಚನ್ನೈ ನಗರದಲ್ಲಿ ಸಮುದ್ರದ ಶುದ್ಧೀಕರಿಸಿದ ನೀರನ್ನು ಬಳಸಲಾಗುತ್ತಿದೆ. ಅದರಂತೆ ದುಬೈ ದೇಶವು ಕೂಡ ಸಮುದ್ರದ ನೀರಿನ ಮೇಲೆ ಸಂಪೂರ್ಣ ಅವಲಂಬಿತವಾಗಿರುವ ಉದಾಹರಣೆ ಇದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಶೇ.50ರಷ್ಟು ಮಳೆ ಪ್ರಮಾಣ ಕಡಿಮೆಯಾಗಿ ಕೆರೆಗಳು ಬತ್ತಿಹೋಗುತ್ತಿವೆ. ಅಂತರ್ಜಲ ಕುಸಿದಿದೆ, ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಕಷ್ಟಪಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಇಂತಹ ಸಂಕಷ್ಟ ಸ್ಥಿತಿಯಲ್ಲಿ ಕಾವೇರಿ ನ್ಯಾಯಮಂಡಳಿ ನೀಡಿದ ಸಂಕಷ್ಟ ಸೂತ್ರ ಪಾಲನೆ ಕಾರ್ಯಸಾಧುವಾಗುವುದಿಲ್ಲ. ನ್ಯಾಯಾಲಯಗಳ ತೀರ್ಪು ಪಾಲಿಸುವ ಸಲುವಾಗಿ ರಾಜ್ಯದ ಹಿತ ಬಲಿಕೊಡುವುದು ತರವಲ್ಲ. ವಾಸ್ತವವನ್ನು ಸಾಂವಿಧಾನಿಕ ಸಂಸ್ಥೆಗಳಿಗೆ ಮನದಟ್ಟು ಮಾಡಿ ಕಾವೇರಿ ಕೊಳ್ಳ ಭಾಗದ ಜನರ ಹಿತದೃಷ್ಟಿಯಿಂದ ಸರ್ಕಾರವು ತಜ್ಞರ ಸಮಿತಿ ರಚಿಸಿ ಸಮಗ್ರ ವರದಿ ಪಡೆದು ಯೋಜನೆ ರೂಪಿಸಬೇಕಿದೆ. ಅಲ್ಪಕಾಲೀನ ಮತ್ತು ದೀರ್ಘಕಾಲಿನ ಪರಿಣಾಮಗಳನ್ನು ಪರಿಗಣಿಸಿ ರಾಜ್ಯದ ಹಿತಕಾಪಾಡುವ ನಿಟ್ಟಿನಲ್ಲೂ ಕಾನೂನು ಹೋರಾಟಗಳಿಗಾಗಿ ಸೂಕ್ತ ಮುಂಜಾಗೃತೆ ವಹಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಮಳೆಯಿಂದಲೇ ನದಿಗಳು ತುಂಬಿ ಹರಿಯಬೇಕೆಂಬ ನಿಲುವನ್ನು ಬದಲಾಯಿಸಿ, ಸಮುದ್ರದ ಶುದ್ಧೀಕರಿಸುವ ನೀರನ್ನು ನದಿಗಳಿಗೆ ಸಂಪರ್ಕಿಸಿದರೆ ವರ್ಷದ 12 ತಿಂಗಳಲ್ಲೂ ನದಿಗಳು ತುಂಬಿ ಹರಿಯುತ್ತವೆ. ಅಲ್ಲದೇ, ಕಳೆದ 25 ವರ್ಷಗಳಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಕುಸಿದಿದೆ. ಸಕಾಲದಲ್ಲಿ ಮಳೆಯಾಗದೆ ಜಲಾಶಯಗಳು ಖಾಲಿಯಾಗಿದ್ದು ಭತ್ತದ ಬೆಳೆ ಬಹಳ ಕಡಿಮೆಯಾಗಿದೆ. ಸಂಪ್ರದಾಯಿಕ ಭತ್ತ, ಕಬ್ಬು ಸೇರಿದಂತೆ ಇತರೆ ಬೆಳೆಗಳ ಫಸಲು ಕೂಡ ಶೇ.50ರಷ್ಟು ಕುಸಿದಿದೆ. ತೋಟಗಾರಿಕೆ ಬೆಳೆಯು ಅವಸಾನದ ಅಂಚಿಗೆ ತಲುಪಿವೆ ಎಂದು ವಿಷಾದ ವ್ಯಕ್ತಪಡಿಸಿರುವ ಅವರು ನದಿಗಳ ಉಗಮ ಸ್ಥಾನಕ್ಕೆ ಸಮುದ್ರದ ಜೋಡಣೆಯಿಂದ ರಾಜ್ಯದಲ್ಲಿ ಸಮೃದ್ಧಿ ತರಬಹುದೆಂದು ಅವರು ಪತ್ರದ ಮೂಲಕ ಸಲಹೆ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: