ಪ್ರಮುಖ ಸುದ್ದಿಮೈಸೂರು

ಶಾಂತಿಯುತ ಟಿಪ್ಪು ಜಯಂತಿ ಆಚರಣೆಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಜಯಂತಿಯನ್ನು ಸೂಕ್ತ ಬಿಗಿ ಭದ್ರತೆಯೊಂದಿಗೆ ಆಚರಿಸಲಾಗುವುದು. ಕಳೆದ ಬಾರಿ ನಡೆದ ಪ್ರತಿಭಟನೆ ಹಾಗೂ ಅವಘಡಗಳಿಗೆ ಎಡೆಮಾಡದೆ ಮುನ್ನೆಚ್ಚರಿಕೆ ಕ್ರಮ ಜರುಗಿಸಿ ಶಾಂತಿಯುತವಾಗಿ ನಡೆಸಲು ಸೂಕ್ತ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಭಾನುವಾರ (ಅ.23) ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ. ಹಲವಾರು ಮಠಮಾನ್ಯಗಳಿಗೆ ದಾನದತ್ತಿ ನೀಡಿರುವ ಬಗ್ಗೆ ಪುರಾವೆಗಳಿವೆ. ಜಯಂತಿ ವಿರೋಧಿಸುವವರು ಸಂಕುಚಿತ ಮನೋಭಾವದವರು. ಸಂಘಪರಿವಾರಕ್ಕೆ ಸಮಾಜದ ಸಾಮರಸ್ಯ ಬೇಕಾಗಿಲ್ಲ, ಸಮಾಜದ ಸ್ವಾಸ್ಥ ಹಾಳುಗೆಡುವುದೇ ಅವರ ಉದ್ದೇಶವಾಗಿದ್ದು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲವೆಂದರು.

ರಾಜ್ಯದ ನಿಗಮ ಮಂಡಳಿಗಳಿಗೆ ತಿಂಗಳಾಂತ್ಯದೊಳಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶ ಹೊರಡಿಸಲಾಗುವುದು. ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು ರಾಜ್ಯೋತ್ಸವದೊಳಗೆ ಪಟ್ಟಿ ಪ್ರಕಟವಾಗುವುದು ಎಂದು ತಿಳಿಸಿದರು.

ಶಾಸಕ ವಿ. ಶ್ರೀನಿವಾಸ ಪ್ರಸಾದ್ ಅವರು ರಾಜೀನಾಮೆ ನೀಡಿರುವುದರಿಂದ ಉಪಚುನಾವಣೆ ಎದುರಿಸಲು ಈಗಾಗಲೇ ಪಕ್ಷವೂ ಸಿದ್ಧವಾಗಿದೆ. ಶ್ರೀನಿವಾಸ ಪ್ರಸಾದ್ ತಮ್ಮ ವಿರುದ್ದ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದರು.

ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಿನಲ್ಲಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಯಡಿಯೂರಪ್ಪ ಅವರು ಭ್ರಮಾ ಲೋಕದಲ್ಲಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು ಎಂದು ಲೇವಡಿ ಮಾಡಿದರು. ಸರ್ಕಾರದ ಕಾರ್ಯವೈಖರಿಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮಾಜಿ ಸಂಸದ ವಿಶ್ವನಾಥ್ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಸರ್ಕಾರದ ಆಡಳಿತ ಹಾಗೂ ಪಕ್ಷಕ್ಕೆ ಸರ್ಟಿಫಿಕೇಟ್ ನೀಡಬೇಕಾಗಿಲ್ಲ ಎಂದರು.

Leave a Reply

comments

Related Articles

error: