ಕರ್ನಾಟಕಮೈಸೂರು

ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು : ಜೆ.ಪ್ರೇಮಕುಮಾರಿ

ಮಂಡ್ಯ, ಆಗಸ್ಟ್ 23 : ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಚಾರ, ಕೋಮುವಾದ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜೆ.ಪ್ರೇಮಕುಮಾರಿ ಅಭಿಪ್ರಾಯಪಟ್ಟರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಇಂದು ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ‘ನವ ಭಾರತ ಸಂಕಲ್ಪ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಮಾಜಿಕ ಪಿಡುಗುಗಳಾಗಿರುವ ಭ್ರಷ್ಟಚಾರ, ಕೋಮುವಾದ, ಭಯೋತ್ಪಾದನೆ ಜೊತೆಗೆ ಬಡತನವನ್ನೂ ಮೂಲೋತ್ಪಾಟನೆ ಮಾಡಬೇಕಿದೆ. ಜಾತ್ಯತೀತ ಮತ್ತು ಸ್ವಚ್ಛ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕಿದ್ದು, ನವ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಶಕ್ತಿಮೀರಿ ಶ್ರಮಿಸಬೇಕಿದೆ ಎಂದು ಕಿವಿಮಾತು ಹೇಳಿದರು. ನನ್ನ ದೇಶ, ನನ್ನ ಭಾಷೆ, ನನ್ನ ಮಾತೃಭೂಮಿ ಎನ್ನುವ ಕಳಕಳಿ, ಬದ್ಧತೆ, ಪ್ರಾಮಾಣಿಕೆ, ನಿಷ್ಠೆಯೊಂದಿಗೆ ಪ್ರತಿಯೊಬ್ಬರೂ ದುಡಿದರೆ ನವ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ. ಶರತ್ ಮಾತನಾಡಿ, ಭ್ರಷ್ಟಚಾರಕ್ಕೆ ಅವಕಾಶವಿಲ್ಲದಂತೆ ಸರ್ಕಾರದ ಕಾರ್ಯಕ್ರಮಗಳು ಅನುಷ್ಠಾನಗೊಳಿಸಬೇಕು. ದೇಶದ ಭದ್ರತೆ ದೃಷ್ಟಿಯಿಂದ ಭಯೋತ್ಪಾದನೆಗೆ ಆಶ್ರಯ ನೀಡಬಾರದು. ಕೋಮುವಾದಕ್ಕೆ ಅವಕಾಶ ಇಲ್ಲದಂತೆ ಸೌರ್ಹಾದಯುತ ವಾತಾವರಣ ಕಾಯ್ದುಕೊಳ್ಳಬೇಕು ಎಂದು ಹೇಳಿದರು.

ನವ ಭಾರತ ನಿರ್ಮಾಣದ ಆಶಯ ಈಡೇರಬೇಕೆಂದರೆ ಪ್ರತಿಯೊಬ್ಬರೂ ಕಾಯ, ವಾಚ, ಮನಸ ಕಾರ್ಯ ನಿರ್ವಹಿಸಬೇಕು. ಎಲ್ಲ ಸ್ತರದ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಹೇಳಿದರು. ಇದಕ್ಕೂ ಮೊದಲು ‘ನವ ಭಾರತ ಸಂಕಲ್ಪ’ ಮಾಡಲಾಯಿತು. ಜಿ.ಪಂ. ಉಪಾಧ್ಯಕ್ಷೆ ಪಿ.ಕೆ. ಗಾಯಿತ್ರಿ, ಜಿಪಂ ಸದಸ್ಯರಾದ ಅನುಸೂಯ, ಪಾಂಡವಪುರ ತಾಪಂ ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ, ಮಂಡ್ಯ ತಾ.ಪಂ. ಅಧ್ಯಕ್ಷ ಬೀರಪ್ಪ, ಉಪ ಕಾರ್ಯದರ್ಶಿ ಎಚ್.ಪಿ. ಪುಟ್ಟಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಣಪತಿ ಸಿ.ನಾಯಕ್ ಹಾಜರಿದ್ದರು.

-ಎನ್.ಬಿ.

Leave a Reply

comments

Related Articles

error: