ಪ್ರಮುಖ ಸುದ್ದಿಮೈಸೂರು

ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ: ತಂದೆ ಮಗನ ಮೇಲೆ ಮಾರಣಾಂತಿಕ ಹಲ್ಲೆ

ಮೈಸೂರಿನ ಎನ್.ಆರ್. ಮೊಹಲ್ಲಾದಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ಮನೆಯಲ್ಲಿದ್ದ ತಂದೆ ಹಾಗೂ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಹಲ್ಲೆಗೊಳಗಾದವರನ್ನು ಶಿವಾಜಿ ರಸ್ತೆಯ ಮೊದಲನೇ ಕ್ರಾಸ್ ನಿವಾಸಿಗಳಾದ ಮೊಕ್ತಾರ್(50), ಅವರ ಪುತ್ರ ಮೊಹಿನ್ ಅಹಮದ್(30) ಎಂದು ಗುರುತಿಸಲಾಗಿದೆ. ಮೊಕ್ತಾರ್ ಅವರು ಮಹಾನಗರಪಾಲಿಕೆ ಎಲೆಕ್ಟ್ರಿಕ್ ಗುತ್ತಿಗೆದಾರರಾಗಿದ್ದರು ಎನ್ನಲಾಗಿದೆ. ಇದೀಗ ಇವರಿಬ್ಬರೂ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಮೊಹಿನ್ ಅವರ ಸ್ಥಿತಿ ಗಂಭೀರವಾಗಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿ 10 ಗಂಟೆಯ ಸುಮಾರಿಗೆ ಮೊಕ್ತಾರ್ ಅವರ ಮನೆಯ ಬಾಗಿಲು ಬಡಿದ ದುಷ್ಕರ್ಮಿಗಳ ತಂಡ ಬಾಗಿಲು ತೆರೆಯುತ್ತಿದ್ದಂತೆ ಮನೆಯೊಳಗೆ ನುಗ್ಗಿದ್ದು ಮೊಹಿನ್ ಅವರನ್ನು ಮನಸೋ ಇಚ್ಛೆ ಥಳಿಸಿದೆ. ಇದನ್ನು ಬಿಡಿಸಲು ಹೋದ ಮೊಕ್ತಾರ್ ಅವರ ಮೇಲೂ ಹಲ್ಲೆ ನಡೆಸಿ ಬಳಿಕ ಅಲ್ಲಿಂದ ಕಾಲ್ಕಿತ್ತಿದೆ ಎನ್ನಲಾಗಿದೆ. ನೆರೆಹೊರೆಯವರು ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಎನ್.ಆರ್. ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್, ಎಸ್.ಐ. ಶಬ್ಬೀರ್ ಹುಸೇನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಏತನ್ಮಧ್ಯೆ ಮೊಹಿನ್ ಅವರಿಗೆ ಯುವತಿಯೊಬ್ಬಳು ಕರೆ ಮಾಡಿ ಬೆದರಿಕೆ ಹಾಕಿದ್ದಳು ಎನ್ನಲಾಗಿದ್ದು, ಈ ಹಲ್ಲೆ ಕೃತ್ಯವನ್ನು ಆಕೆಯ ಪ್ರಚೋದನೆಯಿಂದಲೇ ನಡೆಸಿರಬೇಕೆಂಬ ಶಂಕೆ ವ್ಯಕ್ತವಾಗಿದ್ದು, ಯುವತಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

Leave a Reply

comments

Related Articles

error: