ಮೈಸೂರು

ರಂಗವಿಮರ್ಶೆ ಹೆಚ್ಚು ಪ್ರಬುದ್ಧವಾಗಬೇಕು: ಡಾ. ನ.ರತ್ನ

ರಂಗವಿಮರ್ಶೆ ಅಂದು-ಇಂದು ಜೊತೆಗೆ ಮುಂದೆ ಹೇಗಿರಬೇಕು ಎಂಬ ಬಗೆಗೆ ಚರ್ಚೆಗಳು ನಡೆಯಬೇಕು ಎಂದು ಹಿರಿಯ ರಂಗಕರ್ಮಿ ಡಾ. ನ. ರತ್ನ ಹೇಳಿದರು.

ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಮತ್ತು ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡದ ಸಹಯೋಗದಲ್ಲಿ ಅ.23 ರಂದು ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ‘ರಂಗವಿಮರ್ಶೆ- ಅಂದು-ಇಂದು’ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ರಂಗವಿಮರ್ಶೆ ಮಾಡಬೇಕಾದರೆ ಆತ ರಂಗಕರ್ಮಿಯಾಗಿರಬೇಕು ಇಲ್ಲವೇ ರಂಗಭೂಮಿಯ ಪರಿಚಯವಿರಬೇಕು. ನಾಟಕದ ಕೃತಿಯನ್ನು ಓದಿ ಅದರ ಆಶಯವನ್ನು ಅರ್ಥಮಾಡಿಕೊಂಡು ನಂತರ ಅದನ್ನು ರಂಗಭೂಮಿಯಲ್ಲಿ ಪ್ರದರ್ಶಿಸಬೇಕು. ಪಠ್ಯದ ಭಾಷೆ ಮತ್ತು ರಂಗಭೂಮಿಯ ಭಾಷೆ ಬೇರೆ ಬೇರೆಯೇ ಆಗಿರುತ್ತದೆ.  ವಿಮರ್ಶಕನಾದವನು ಆಲೋಚನೆ ಮಾಡಿ ವಿಮರ್ಶೆ ಮಾಡಬೇಕು. ರಂಗವಿಮರ್ಶೆಯಲ್ಲಿ ತಾತ್ವಿಕ ಚರ್ಚೆಗಳು ನಡೆದು ಪ್ರಬುದ್ಧವಾಗಬೇಕು. ಪ್ರಬುದ್ಧ ವಿಮರ್ಶೆಗಳು ಬೆಳೆಯಬೇಕು” ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಮಾತನಾಡಿ, “ಇತ್ತೀಚೆಗೆ ಅಭಿನಯದ ಬಗ್ಗೆ ದ್ವಂದ್ವ ವಿಮರ್ಶೆಗಳು ಹೆಚ್ಚಾಗಿ ಬರುತ್ತಿವೆ. ಇದು ನಟನಾಕಾರರಿಗೆ ಗೊಂದಲವನ್ನು ಉಂಟುಮಾಡುತ್ತಿವೆ. ಆದ್ದರಿಂದ ಆರೋಗ್ಯಕರ ವಿಮರ್ಶೆಗಳು ಮೂಡಿ ಬರಬೇಕು” ಎಂದು ಹೇಳಿದರು.

ಹಿರಿಯ ರಂಗಕರ್ಮಿ ಡಾ. ಎಚ್.ಕೆ. ರಾಮನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಂಗ ನಿರ್ದೇಶಕ ಪ್ರೊ. ಎಚ್.ಎಸ್. ಉಮೇಶ್ ಅವರು ‘ರಂಗ ವಿಮರ್ಶೆ ಬೆಳೆದು ಬಂದ ದಾರಿ’, ರಂಗ ಚಿಂತಕ ಶ್ರೀಕಂಠ ಗುಂಡಪ್ಪ ಅವರು ‘ನಾಟಕವನ್ನು ನೋಡುವ ಬಗೆ’, ರಂಗ ಚಿಂತಕ ಪ್ರೊ.ಸಿ.ವಿ.ಶ್ರೀಧರಮೂರ್ತಿ ಅವರು ‘ನಾಟಕ ಕೃತಿ ಮತ್ತು ರಂಗ ಪ್ರದರ್ಶನದ ವಿಮರ್ಶಾಕ್ರಮ’ ಕುರಿತು ವಿಷಯ ಮಂಡನೆ ಮಾಡಿದರು.

Leave a Reply

comments

Related Articles

error: