ಮೈಸೂರು

ಬೆಂಬಲವೊಂದಿದ್ದರೆ ಮಹಿಳೆ ಏನನ್ನಾದರೂ ಸಾಧಿಸಬಲ್ಲಳು

page5lead-2webಮಹಿಳೆ ಕೇವಲ ಅಡುಗೆಮನೆಗೆ ಸೀಮಿತ ಅನ್ನೋ ಕಾಲ ಯಾವತ್ತೋ ಮುಗಿದುಹೋಯಿತು. ಆಕೆ ಇದೀಗ ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಮಹಿಳೆಯರಿಗೆ ಯಾರೊಬ್ಬರ ಅನುಕಂಪ ಬೇಡ. ಆಕೆಗೆ ಬೇಕಿರುವುದು ಕೇವಲ ಬೆಂಬಲ ಮಾತ್ರ. ಯಾರದ್ದಾದರೂ ಬೆಂಬಲವೊಂದಿದ್ದರೆ ಆಕೆ ಜೀವನದಲ್ಲಿ ಮಹಾನ್ ಸಾಧನೆಗಳನ್ನು ಮಾಡಬಲ್ಲಳು.

ಹಲವು ಮಹಿಳೆಯರು ಚಿಕ್ಕವರಿರುವಾಗಲೇ ಎಷ್ಟೋ ವಿದ್ಯೆಗಳನ್ನು ಕರಗತ ಮಾಡಿಕೊಂಡಿರುತ್ತಾರೆ. ಅವರಿಗೆ ಕಲೆಯಲ್ಲಿ ವಿಪರೀತ ಆಸಕ್ತಿ. ಕರಕುಶಲ ಕಲೆಗಳನ್ನು ಸುಲಲಿತವಾಗಿ ಮಾಡಬಲ್ಲರು. ಮಹಿಳೆ ಬಳೆ, ಬ್ರೆಸ್ ಲೆಟ್ಸ್, ಕಿವಿಯೋಲೆಗಳು, ಹೂವಿನ ಅಲಂಕಾರ, ಮಣ್ಣು ಮತ್ತು ಟೆರ್ರಾಕೋಟ್ ಗಳಿಂದ ಹಲವು ಆಕರ್ಷಕ ವಸ್ತುಗಳನ್ನು ತಯಾರಿಸಬಲ್ಲಳಾದರೂ ಅದನ್ನು ಹೇಗೆ ಮಾರುಕಟ್ಟೆಗೆ ಪರಿಚಯಿಸಬೇಕು ಎನ್ನುವ ಮಾರ್ಗ ತಿಳಿದಿರುವುದಿಲ್ಲ. ಅದು ಆಕೆಗೆ ಕಷ್ಟವೇ, ಆದರೆ ಆಕೆಗೆ ಕುಟುಂಬದ ಬೆಂಬಲವಿದ್ದರೆ  ಎಲ್ಲವನ್ನೂ ಸುಲಲಿತವಾಗಿ ನಿಭಾಯಿಸಬಲ್ಲಳು.

ಮನೆಯಲ್ಲಿಯೇ ತಯಾರಿಸಲಾಗುವ ಹಲವು ಉತ್ಪನ್ನಗಳನ್ನು ಹಾಗೂ ಕರಕುಶಲ ಕೌಶಲಗಳನ್ನು ಪ್ರದರ್ಶಿಸಲು, ತಮ್ಮದೇ ಆದ ಅಂಗಡಿಗಳನ್ನಿರಿಸಲು ಸರ್ಕಾರವು ಸಾಲದ ವ್ಯವಸ್ಥೆಯನ್ನು ಮಾಡುತ್ತದೆ. ಅಂತಹ ಒಂದು ಅಂಗಡಿಯನ್ನು ಹೊಂದಿದ ಮಹಿಳೆಯರು ಇದೀಗ ವಸ್ತು ಪ್ರದರ್ಶನದಲ್ಲಿಯೂ ತಮ್ಮ ಮಳಿಗೆಗಳನ್ನು ತೆರೆದು ಜನತೆಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುವೆಂಪು ನಗರ ನಿವಾಸಿ ಅಂಜಲಿ ಎಂಬುವರು ಸರ್ಕಾರದ ಯೋಜನೆಯಡಿ ಮನೆಯಲ್ಲಿಯೇ ಹಲವು ಉತ್ಪನ್ನಗಳನ್ನು ತಯಾರಿಸಿದ್ದಾರೆ. ಅವರು ಕುವೆಂಪುನಗರದಲ್ಲಿಯೇ ಸ್ವಂತಃ ಅಂಗಡಿಯೊಂದನ್ನು ಆರಂಭಿಸಿದ್ದು, ಇದೀಗ ದಸರಾ ವಸ್ತುಪ್ರದರ್ಶನದಲ್ಲಿಯೂ ಮಳಿಗೆ ತೆರೆದಿದ್ದಾರೆ. ಈ ಕುರಿತು ‘ಸಿಟಿಟುಡೆ’ ಪ್ರತಿನಿಧಿ ಮಾತನಾಡಿಸಿದಾಗ “ಮಹಿಳೆಯರಿಗಾಗಿ ನೀಡುವ ಸಾಲ ಯೋಜನೆಯಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ಒಳ್ಳೆಯ ಲಾಭ ಪಡೆಯಲಾಗುತ್ತಿದೆ. ಇಲ್ಲಿ ತಯಾರಿಸಲ್ಪಟ್ಟ ಆಭರಣಗಳ ಬೆಲೆ ಕೇವಲ 20 ರಿಂದ 200 ರೂ.ಮಾತ್ರ. ಇಲ್ಲಿ ಖರೀದಿಗಾಗಿ ಬರುವವರ ಪ್ರತಿಕ್ರಿಯೆಯು ತುಂಬಾ ಚೆನ್ನಾಗಿಯೇ ಇದೆ” ಎಂದರು.

ಟಿ. ನರಸೀಪುರ ನಿವಾಸಿ ಸಮೀರ ಭಾನು ಅವರು ಮಾತನಾಡಿ, “ಹೂವಿನ ಕುಂಡಗಳನ್ನು ತಯಾರಿಸಿದ್ದೇವೆ. ಕೃತಕ ಹೂಗಳನ್ನು ತಯಾರಿಸುತ್ತೇವೆ. ನಮ್ಮದೇ ಆದ ಒಂದು ಗುಂಪು ಇದರಲ್ಲಿ ತೊಡಗಿಸಿಕೊಂಡಿದೆ. ಸರ್ಕಾರದ ಈ ಸಾಲ ಯೋಜನೆಯು ಮಹಿಳೆಯರಲ್ಲಿ ಸ್ಫೂರ್ತಿ ತುಂಬಿದ್ದು, ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಸಹಾಯಮಾಡುತ್ತಿದೆ” ಎಂದು ಹೇಳಿದರು.

ದಸರಾ ವಸ್ತು ಪ್ರದರ್ಶನದಲ್ಲಿ ಇದೀಗ ನಾಲ್ಕನೇ ಬಾರಿ ನಾವು ಮಳಿಗೆಗಳನ್ನು ಹಾಕಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾರಿಗೆ ಕಲೆಯಲ್ಲಿ ಆಸಕ್ತಿ ಇದೆಯೋ ಅಂಥಹವರಿಗೆ ಇದು ನಿಜಕ್ಕೂ ಲಾಭದಾಯಕ ಎಂದು ತಿಳಿಸಿದರು.

ಎಷ್ಟೋ ಮಂದಿ ನಮ್ಮಿಂದ ಏನೂ ಸಾಧ್ಯವಿಲ್ಲ ಎಂದುಕೊಂಡಿರುತ್ತಾರೆ. ಆದರೆ ಅವರೂ ಸಹ ಏನಾದರೂ ಸಾಧಿಸಬಲ್ಲರು. ಅವರಿಗೆ ಅವರಲ್ಲಿರುವ ಪ್ರತಿಭೆ ತಿಳಿದಿರುವುದಿಲ್ಲ. ಅಂಥವರು ಸರ್ಕಾರದ ಇಂತಹ ಸವಲತ್ತುಗಳು ಪಡೆದು ತಮ್ಮ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಳ್ಳಬಹುದು.

Leave a Reply

comments

Related Articles

error: