ಮೈಸೂರು

ಆ.೨೯ಕ್ಕೆ ರಾಜೇಂದ್ರ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಶಿಲಾನ್ಯಾಸ: ಬೆಟಸೂರ ಮಠ್

ಮೈಸೂರು, ಆ.೨೬: ರಾಜೇಂದ್ರ ಶ್ರೀಗಳ ಶತಮಾನೋತ್ಸವದ ನೆನಪಿಗಾಗಿ ಪುತ್ಥಳಿಯನ್ನು ನಿರ್ಮಿಸಲಾಗುತ್ತಿದ್ದು, ಶಿಲಾನ್ಯಾಸವನ್ನು ಆ.೨೯ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜೆ.ಬೆಟಸೂರ ಮಠ್ ತಿಳಿಸಿದರು.
ಶನಿವಾರ ನಗರದ ರಾಜೇಂದ್ರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರು ವೀರ ಸಿಂಹಾಸನ ಮಠದ ಇಪ್ಪತ್ತಮೂರನೇ ಜಗದ್ಗುರಗಳಾದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತಮಾನೋತ್ಸವದ ನೆನಪಿಗಾಗಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಮುಂಭಾಗವಿರುವ ವೃತ್ತದಲ್ಲಿ ಶ್ರೀಗಳ ಪುತ್ಥಳಿ ನಿರ್ಮಿಸುತ್ತಿದ್ದು, ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಂದು ಬೆಳಗ್ಗೆ ೧೦.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸಲಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪ್ರಸಾದ ವಿಶೇಷ ಸಂಚಿಕೆ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ಜೆಎಸ್‌ಎಸ್ ವಾರ್ತಾಪತ್ರ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದ ಅವರು ಅಂದು ೮.೩೦ಕ್ಕೆ ಶ್ರೀಗಳ ಪುತ್ಥಳಿ ಉತ್ಸವ ನಡೆಯಲಿದ್ದು ಜಾನಪದ ಕಲಾತಂಡಗಳು, ಭಜನಾ ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಜಕ ಟಿ.ಡಿ.ಸುಬ್ಬಣ್ಣ, ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: