ಮೈಸೂರು

ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಮೆ ಸ್ಥಾಪನೆಗೆ ಒತ್ತಾಯ

ಮೈಸೂರು, ಆ.26- ಜಗತ್ಪ್ರಸಿದ್ಧ ಮೈಸೂರು ಅರಮನೆಯ ದಕ್ಷಿಣ ದ್ವಾರದ ಮುಂಭಾಗ ಗನ್‌ಹೌಸ್ ವೃತ್ತದಲ್ಲಿ ದಿವಂಗತ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪ್ರತಿಮೆಯನ್ನು ಸ್ಥಾಪಿಸುವಂತೆ ಅರಮನೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ನಂದೀಶ್ ಜಿ ಅರಸ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಮೈಸೂರು ಅರಮನೆ ಸುತ್ತಮುತ್ತಲಿರುವ ಪಾರಂಪರಿಕ ವೃತ್ತದಲ್ಲಿ ರಾಜಮಹಾರಾಜರ ಪ್ರತಿಮೆ ನಿರ್ಮಿಸಲಾಗಿದ್ದು, ಇದೀಗ ಅರಮನೆ  ಭಾಗದಲ್ಲಿರುವ ಗನ್‌ಹೌಸ್ ವೃತ್ತದಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ಸಿದ್ಧರಾಗುತ್ತಿದ್ದಾರೆ. ಆದರೆ ಈಗಾಗಲೇ ಆ ಸ್ಥಳದಲ್ಲಿ ಯದುವಂಶದ ಕೊನೆಯ ತಿಲಕವಾದ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರ ಪುತ್ಥಳಿ ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಹ ಮಾಡಲಾಗಿರುತ್ತದೆ. ಆದರೆ ಸರ್ಕಾರ ನಮ್ಮ ಬೇಡಿಕೆಯನ್ನು ಕಡೆಗಣಿಸದೇ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಮೈಸೂರಿನ ಜನರಲ್ಲಿ ಬೇಸರ ಮೂಡಿಸಿದೆ ಎಂದು ವಿಷಾದಿಸಿದರು.

ಈ ಕುರಿತಾಗಿ ಮುಖ್ಯಮಂತ್ರಿಗಳು ಹಾಗೂ ಸುತ್ತೂರು ದೇಶೀಕೇಂದ್ರ ಮಹಾಸ್ವಾಮಿಗಳಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದ್ದು, ಸದರಿ ಸಥಳದಲ್ಲಿ ಶಿಲಾನ್ಯಾಸ ನಿರ್ಮಾಣವನ್ನು ಕೈಬಿಟ್ಟು ಬೇರೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಂತೆ ಆಗ್ರಹಿಸಿದರು. ಒಂದು ವೇಳೆ ಆ.29ರಂದು ಅದೇ ಸ್ಥಳದಲ್ಲಿ ಶಿಲಾನ್ಯಾಸ ನೆರವೇರಿಸಲು ಮುಂದಾದರೆ ಸಾಂಕೇತಿಕವಾಗಿ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೆ ವಿವಿಧ ಸಂಘಟನೆಗಳಿಂದ ಹಂತ ಹಂತವಾಗಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಸಮಿತಿ ಕಾರ್ಯದರ್ಶಿ ಸೋಸಲೆ ಸಿದ್ದರಾಜು, ಅಧ್ಯಕ್ಷ ಎಂ.ರಾಮೇಗೌಡ, ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠ ಅಶ್ವಥ್ ನಾರಾಯಣ ರಾಜೇ ಅರಸ್, ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಮಧುವನ ಚಂದ್ರು ಹಾಗೂ ಸಂಚಾಲಕ ಟಿ.ಕೆ.ಸುಬ್ರಹ್ಮಣ್ಯೇರಾಜೇ ಅರಸ್ ಉಪಸ್ಥಿತರಿದ್ದರು.

 

Leave a Reply

comments

Related Articles

error: