ಮೈಸೂರು

ಕಾವ್ಯ ರಚನೆಗೆ ಸೂಕ್ಷ್ಮ ಸಂವೇದನೆ ಬೇಕು: ಪ್ರೊ. ಗಿರಡ್ಡಿ ಗೋವಿಂದರಾಜು

ಹಳೆಗನ್ನಡ ಕಾವ್ಯ ಮತ್ತು ನವ್ಯ ಕಾವ್ಯಗಳ ನಡುವೆ ತುಂಬಾ ವ್ಯತ್ಯಾಸಗಳಿವೆ. ಇಂದಿನ ಕವಿತೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟವಾದ ಕೆಲಸ. ಹೊಸ ಹೊಸ ಒತ್ತಡಗಳು ಹೆಚ್ಚಿದಂತೆ ಹೊಸ ಹೊಸ ಕಾವ್ಯಗಳು ಹುಟ್ಟುತ್ತಿವೆ. ಅಂತಹ ಕಾವ್ಯಗಳನ್ನು ಸೂಕ್ಷ್ಮ ಸಂವೇದನೆಯಿಂದ ಅರ್ಥಮಾಡಿಕೊಳ್ಳಬೇಕು ಎಂದು ಧಾರವಾಡದ ಹಿರಿಯ ವಿಮರ್ಶಕ ಪ್ರೊ. ಗಿರಡ್ಡಿ ಗೋವಿಂದರಾಜು ಹೇಳಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ವತಿಯಿಂದ ಮಾನಸಗಂಗೋತ್ರಿಯ ಬಿ.ಎಂ.ಶ್ರೀ. ಸಭಾಂಗಣದಲ್ಲಿ ಅ.24 ರಂದು ಏರ್ಪಡಿಸಿದ್ದ ‘ಮೂರು ದಿನಗಳ ಕನ್ನಡ ಕಾವ್ಯ ಕಮ್ಮಟ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕಾವ್ಯ ಹುಟ್ಟುವ ರೀತಿ ವಿಮರ್ಶಕರಿಗೆ ಗೊತ್ತಿರುವುದಿಲ್ಲ. ಅದು ಕವಿಗಳಿಗೆ ಮಾತ್ರ ಗೊತ್ತಿರುತ್ತದೆ. ಇಂದಿನ ಈ ಕಾರ್ಯಾಗಾರವು ಕಾವ್ಯದ ರಚನೆ, ಅರ್ಥ, ವಿಮರ್ಶೆ ಮತ್ತು  ಬೋಧನೆಯನ್ನು ತಿಳಿಸುವ ಕಾರ್ಯ ಮಾಡುತ್ತದೆ. ಆದರೆ ಇತ್ತೀಚಿನ ಸಂದರ್ಭಗಳಲ್ಲಿ ಅರ್ಥವಿಲ್ಲದ ಕವಿತೆಗಳು ಮತ್ತು ವಿಮರ್ಶೆಗಳು ಮೂಡಿಬರುತ್ತಿವೆ. ಕಾವ್ಯ ರಚನೆಗೆ ಸೂಕ್ಷ್ಮ ಸಂವೇದನೆ ಬೇಕು. ಅಂತೆಯೇ ವಿಮರ್ಶೆ ಮಾಡುವುದು ಸಹ ಸೃಜನಶೀಲ ಕೆಲಸ” ಎಂದರು.

ಮುಖ್ಯ ಅತಿಥಿಯಾಗಿದ್ದ ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ಮಾತನಾಡಿ, ಆಧುನಿಕ ಕಾಲ ತೀವ್ರ ಸಂದಿಗ್ಧತೆಯನ್ನು ತಂದೊಡ್ಡುತ್ತಿದೆ. ಮನುಷ್ಯ ಕ್ರೂರಿಯಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಸಾಹಿತ್ಯವು ಆಧುನಿಕ ಒತ್ತಡ ಮತ್ತು ಮಾನವನ ಕ್ರೌರ್ಯ ಮನೋಭಾವವನ್ನು ಶಮನ ಮಾಡಬಲ್ಲ ಶಕ್ತಿ ಹೊಂದಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಅರವಿಂದ ಮಾಲಗತ್ತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ. ಪ್ರೀತಿ ಶ್ರೀಮಂಧರ ಕುಮಾರ್ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: