ಮೈಸೂರು

ಜಾನಪದ ಕಲೆಯಲ್ಲಿರುವ ಆನಂದ ಬೇರಾವುದರಲ್ಲೂ ಸಿಗದು: ಸೋಮಶೇಖರ್ ಅಭಿಮತ

ಜಾನಪದ ಕಲೆ ಶೂದ್ರರು, ದಲಿತರು, ಶ್ರಮಜೀವಿಗಳ ನೋವು-ನಲಿವು ಜೀವನಾನುಭವಗಳಿಂದ ಹುಟ್ಟಿದ್ದು, ಇದರಲ್ಲಿರುವ ಆನಂದ – ಸೊಗಡು ಬೇರೆ ಯಾವುದರಲ್ಲೂ ಇಲ್ಲ. ಇಂತಹ ವಿಶಿಷ್ಟ ಕಲೆಯನ್ನು ಗುರುತಿಸಿ, ಹೊರತಂದು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಶಾಸಕ ಎಂ.ಕೆ. ಸೋಮಶೇಖರ್ ಅಭಿಪ್ರಾಯಪಟ್ಟರು.

ಸೋಮವಾರ ನಗರದ  ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕನ್ನಡ ಜಾನಪದ ಪರಿಷತ್  ಜಿಲ್ಲಾ ಘಟಕದ ಉದ್ಘಾಟನೆಯನ್ನು ಎಂ.ಕೆ. ಸೋಮಶೇಖರ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಜಾನಪದ ಕಲೆ ಲಿಖಿತವಾಗಿ, ದಾಖಲೆಗಳ ಮೂಲಕ ಬೆಳೆದಿಲ್ಲ. ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಸಾಗಿ ಮೌಖಿಕವಾಗಿ ಬೆಳೆದು ಬಂದಿದೆ. ರೈತ ಹೊಲದಲ್ಲಿ ಉಳುಮೆ ಮಾಡುವಾಗ, ಹೆಣ್ಣು ಮಗಳು ನೀರು ಸೇದುವಾಗ, ಹೆಂಗಸರು ರಾಗಿ ಬೀಸುವಾಗ ಅವರ ನೋವು-ನಲಿವುಗಳು ಸಾಹಿತ್ಯ ರೂಪದಲ್ಲಿ ಜಾನಪದ ಕಲೆಯಾಗಿ ರೂಪುಗೊಂಡು ಇಂದು ಕನ್ನಡ ಸಾಹಿತ್ಯದ ಹಿರಿಮೆ-ಗರಿಮೆಯಾಗಿ ಬೆಳೆದುನಿಂತಿದೆ ಎಂದರು.

ಜಾನಪದ ಕಲೆಯಲ್ಲಿ ಕೇವಲ ಅನುಭವಗಳು ಮಾತ್ರವಲ್ಲದೆ ಶೃಂಗಾರ, ಆಧ್ಯಾತ್ಮ, ನೀತಿಪಾಠ ಎಲ್ಲವೂ ಇದೆ. ಜಾನಪದ ಕಲೆ ಜೀವನದ ಅನುಭಾವ ಗದ್ಯ. ಇದರ ಆಳ ವಿಶಾಲವಾದುದು. ಅದರ ಒಳಹೊಕ್ಕು ನೋಡಿದರೆ ಜೀವನದ ನಿಜವಾದ ಅರ್ಥ ಸಿಗುತ್ತದೆ. ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಾಕಾರಗಳಲ್ಲಿ ಜಾನಪದ ಕಲೆ ಅಗ್ರಸ್ಥಾನ ಪಡೆದುಕೊಂಡಿದೆ. ತೆರೆಮರೆಯಲ್ಲಿರುವ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯತೆ ಇದೆ. ಕೇವಲ ಮೌಖಿಕವಾಗಿರುವ ಜಾನಪದ ಸಾಹಿತ್ಯವನ್ನು ಲಿಖಿತ ರೂಪದಲ್ಲಿ ದಾಖಲು ಮಾಡಿ ಯುವಪೀಳಿಗೆಗೆ ಜಾನಪದ ಸಾಹಿತ್ಯದ ಮಹತ್ವವನ್ನು ಪರಿಚಯಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಪಿ.ಕೆ. ರಾಜಶೇಖರ್, ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಕನ್ನಡ ಜಾನಪದ ಪರಿಷತ್ ಖಜಾಂಚಿ ಕನಕತಾರ, ಕನ್ನಡ ಜಾನಪದ ಪರಿಷತ್ ಕಾರ್ಯಾಧ್ಯಕ್ಷ  ಬಾಲಾಜಿ, ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ. ಆರ್. ಗಣೇಶ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಲರಾಂ, ಕೆ. ಮರೀಗೌಡ, ಸಿಂಡಿಕೇಟ್ ಸದಸ್ಯ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: