ಕರ್ನಾಟಕಪ್ರಮುಖ ಸುದ್ದಿಮೈಸೂರು

ಶ್ರೀರಂಗಪಟ್ಟಣ : ರವೀಂದ್ರ ಶ್ರೀಕಂಠಯ್ಯ ಜೆಡಿಎಸ್‍ ಸೇರ್ಪಡೆಗೆ ದೇವೇಗೌಡ, ಕುಮಾರಸ್ವಾಮಿ ಸಮ್ಮತಿ

ಬೆಂಗಳೂರು, ಆಗಸ್ಟ್ 26 : ಶ್ರೀರಂಗಪಟ್ಟಣ ಕಾಂಗ್ರೆಸ್ ಮುಖಂಡ ರವೀಂದ್ರ ಶ್ರೀಕಂಠಯ್ಯ ಅವರ ಜೆಡಿಎಸ್ ಸೇರ್ಪಡೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ರವೀಂದ್ರ ಶ್ರೀಕಂಠಯ್ಯ ಸೇರ್ಪಡೆ ಸಂಬಂಧ ಮಂಡ್ಯದ ಜೆಡಿಎಸ್ ಸಂಸದ ಸಿ.ಎಸ್‍.ಪುಟರಾಜು ಅವರು ದೇವೇಗೌಡ ಅವರೊಂದಿಗೆ ಈ ಮೊದಲು ಮಾತುಕತೆ ನಡೆಸಿದ್ದರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಮಾತುಕತೆ ನಡೆದಿತ್ತು ಎಂದು ತಿಳಿದುಬಂದಿದ್ದು, ಈ ಮಾತುಕತೆ ನಡೆದ ಬಳಿಕ ಲಾಭ-ನಷ್ಟದ ಲೆಕ್ಕಾಚಾರ ನಡೆಸಿದ ದೇವೇಗೌಡರು ರವೀಂದ್ರ ಅವರ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯದಲ್ಲೇ ರವೀಂದ್ರ ಅವರು ಜೆಡಿಎಸ್ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಮುಂದಿನ ವಿಧಾನಸಭಾ ಚುಣಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಬಹುದಾದ ಸಾಧ್ಯತೆ ಇದೆ.

ಜೆಡಿಎಸ್ ವಿಪ್‍ ಉಲ್ಲಂಘಿಸಿ ಮತ ಚಲಾಯಿಸಿದ ಶ್ರೀರಂಗಪಟ್ಟಣದ ಹಾಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಜೆಡಿಎಸ್‍ನಿಂದ ಅಮಾನತು ಮಾಡಲಾಗಿದೆ. ಅವರಿಗೆ ಕಾಂಗ್ರೆಸ್‍ನಿಂದ ಟಿಕೆಟ್ ಕೊಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಮೊರೆಹೋಗಿರುವುದರಿಂದ ಬೇಸರಗೊಂಡಿರುವ ರವೀಂದ್ರ ಅವರು ಜೆಡಿಎಸ್‍ ಸೇರ್ಪಡೆಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ದಶಕಗಳಿಂದ ಈ ಎರಡು ಕುಟುಂಬಗಳ ಸದಸ್ಯರೇ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದು, ಮುಂದಿನ ವಿಧಾನಸಭಾ ಚುಣಾವಣೆಯಲ್ಲೂ ಇದೇ ಹಣಾಹಣಿ ಪುನರಾವರ್ತನೆಯಾಗಬಹುದು. ಆದರೆ ಪ್ರತಿನಿಧಿಸುವ ಪಕ್ಷಗಳು ಅದಲು ಬದಲಾಗಲಿವೆಯಷ್ಟೆ.

-ಎನ್.ಬಿ.

Leave a Reply

comments

Related Articles

error: