ಪ್ರಮುಖ ಸುದ್ದಿಮೈಸೂರು

ತರಬೇತುದಾರರ ಮಾರ್ಗದರ್ಶನದಂತೆ ನಡೆದಲ್ಲಿ ಕ್ರೀಡಾರಂಗದಲ್ಲಿ ಯಶಸ್ಸು ಕಾಣಲು ಸಾಧ್ಯ : ಅರ್ಜುನ ದೇವಯ್ಯ

ಮೈಸೂರು, ಆ. 27:- ತರಬೇತುದಾರರ ಮಾರ್ಗದರ್ಶನದಂತೆ ನಡೆದುಕೊಂಡಲ್ಲಿ ಕ್ರೀಡಾರಂಗದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಅರ್ಜುನ ದೇವಯ್ಯ ಅಭಿಪ್ರಾಯಪಟ್ಟರು.

ಅವರು ಭಾನುವಾರ ಬೆಳಿಗ್ಗೆ ರಾಮಕೃಷ್ಣ ನಗರದ ಆಂದೋಲನ ವೃತ್ತದಲ್ಲಿ ಪ್ಯಾಲೆಸ್ ಸ್ಪೋಟ್ಸ್ ಕ್ಲಬ್ ವತಿಯಿಂದ 71ನೇ ವರ್ಷದ ಸ್ವಾತಂತ್ರೋತ್ಸವ ಮತ್ತು ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 5ನೇ ವರ್ಷದ ಜಿಲ್ಲಾ ಮಟ್ಟದ ಚಾಮುಂಡಿ ರಸ್ತೆ ಓಟ ಸ್ಪರ್ಧೆಯನ್ನು ತ್ರಿವರ್ಣ ಬೆಲೂನ್‍ಗಳನ್ನು ಹಾರಿಬಿಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಜೀವನದಲ್ಲಿ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸತತ ಅಭ್ಯಾಸ ಮಾಡುವುದರೊಂದಿಗೆ ಹಿರಿಯ ತರಬೇತುದಾರರು ನೀಡುವ ಸಲಹೆ, ಮಾರ್ಗದರ್ಶನಗಳಂತೆ ನಡೆದುಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದ ತರಬೇತುದಾರರನ್ನು ವಿದ್ಯೆ ನೀಡಿದ ಗುರುಗಳು ಅಥವಾ ಶಿಕ್ಷಕರುಗಳಷ್ಟೇ ಸಮಾನರು ಎಂದು ಭಾವಿಸಿಕೊಳ್ಳಿ ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

ಕೆಲವು ಪೋಷಕರಲ್ಲಿ ತಮ್ಮ ಮಕ್ಕಳು ಕ್ರೀಡೆಗಳಲ್ಲಿ ತೊಡಗಿಸಿಕೊಂಡಲ್ಲಿ ಅವರ ಪಠ್ಯ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ ಎಂಬ ಮನೋಭಾವ ಮೂಡಿರುತ್ತದೆ. ಇದು ತಪ್ಪು ಕಲ್ಪನೆಯನ್ನು ಕಿತ್ತೊಗೆದು ತಮ್ಮ ಮಕ್ಕಳ ವಿದ್ಯಾರ್ಜನೆಗೆ ಹಾಗೂ ಕ್ರೀಡಾಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತೆ ಸಮಾರಂಭದಲ್ಲಿ ನೆರೆದಿದ್ದ ಪೋಷಕರಲ್ಲಿ ಮನವಿ ಮಾಡಿದರು. ನೀವು 18 ವರ್ಷ ಪೂರ್ಣಗೊಳ್ಳುವವರೆಗೆ ಯಾವುದೇ ಕಾರಣದಿಂದಲೂ ಮೊಬೈಲ್‍ಅನ್ನು ಬಳಸಬಾರದು. ಒಂದು ವೇಳೆ ಮೊಬೈಲ್‍ನ್ನು ಬಳಸಿದ್ದೇ ಆದಲ್ಲಿ ಅಂದಿನಿಂದಲೇ ನಿಮ್ಮ ಜೀವನ ಅಂತ್ಯಗೊಳ್ಳುತ್ತದೆ ಎಂದು ಮಾರ್ಮಿಕವಾಗಿ ಮೊಬೈಲ್ ಬಳಸದಂತೆ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದ ಅರ್ಜುನ ದೇವಯ್ಯ ನಿಮ್ಮ ಇಂದಿನ ಸಾಧನೆ ಮುಂದಿನ ಭವಿಷ್ಯಕ್ಕೆ ನಾಂದಿಯಾಗಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮೇಯರ್ ರವಿಕುಮಾರ್ ಆಗಮಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು.  ಸ್ಪರ್ಧೆಯಲ್ಲಿ 1,500ಕ್ಕೂ ಹೆಚ್ಚು ಶಾಲಾ ಬಾಲಕ ಬಾಲಕಿಯರು ಪಾಲ್ಗೊಂಡಿದ್ದರು. 8 ರಿಂದ 14 ವರ್ಷದೊಳಗಿನವರಿಗೆ 4 ಕಿ.ಮೀ ದೂರದ ಓಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ಲಬ್‍ನ ವತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡ ಬಾಲಕ-ಬಾಲಕಿಯರಿಗೆ ಉಚಿತ ಟಿಷರ್ಟ್‍ಗಳನ್ನು ನೀಡುವುದರೊಂದಿಗೆ ಓಟ ಸ್ಪರ್ಧೆ ಮುಗಿದ ನಂತರ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಸಮಾರಂಭದಲ್ಲಿ ಕ್ಲಬ್‍ನ ಅಧ್ಯಕ್ಷ ಹರೀಶ್‍ಗೌಡ, ಉಪಾಧ್ಯಕ್ಷರಾದ ಎಂ.ಎನ್ ರಮೇಶ್, ಆರ್,ವೈ.ಅರುಣ್, ಕಾರ್ಯದರ್ಶಿ ಪ್ರಕಾಶ್ ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: