ದೇಶಪ್ರಮುಖ ಸುದ್ದಿ

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ಪ್ರಮಾಣ ವಚನ ಸ್ವೀಕಾರ

ನವದೆಹಲಿ, ಆ.28 : ಭಾರತ ಸುಪ್ರೀಂ ಕೋರ್ಟ್‍ನ ಮುಖ್ಯನ್ಯಾಯಮೂರ್ತಿಯಾಗಿ ದೀಪಕ್‍ ಮಿಶ್ರ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೀಪಕ್ ಮಿಶ್ರಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನ್ಯಾಯಮೂರ್ತಿ ಜೆ.ಎಸ್.ಖೆಹರ್ ಅವರ ಅಧಿಕಾರಾವಧಿ ಭಾನುವಾರ ಮುಕ್ತಾಯವಾದ ಹಿನ್ನಲೆಯಲ್ಲಿ ದೀಪಕ್ ಮಿಶ್ರಾ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಾಗಿತ್ತು. 45ನೇ ಮುಖ್ಯನ್ಯಾಯಮೂರ್ತಿಯಾಗಿ ಮಿಶ್ರಾ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಮಿಶ್ರಾ ಅವರು ಕಾವೇರಿ ಜಲ ವಿವಾದ, ಬಾಬ್ರಿ ಮಸೀದಿ ಪ್ರಕರಣ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಮೆನನ್‍ಗೆ ಗಲ್ಲು ಶಿಕ್ಷೆ ನೀಡಿದ್ದು, ಫಿಸಿಯೋ ಥೆರಪಿಯೊಬ್ಬರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದು ಮಹತ್ವದ ತೀರ್ಪುಗಳು ಎನ್ನಬಹುದು.

ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮಿಶ್ರಾ ಅವರು 2011ರ ಅಕ್ಟೋಬರ್ 10ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಕೊಂಡಿದ್ದರು. ದೀಪಕ್ ಮಿಶ್ರಾ ಅವರು ಒಡಿಶಾ ರಾಜ್ಯದಿಂದ ಸುಪ್ರೀಮ್‍ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಮೂರನೇ ವ್ಯಕ್ತಿಯಾಗಿದ್ದು, ಇವರ ಅಧಿಕಾರಾವಧಿ 2018 ರ ಅಕ್ಟೋಬರ್ 18ವರೆಗೆ ಇರಲಿದೆ.

1953ರ ಅಕ್ಟೋಬರ್ 3 ರಂದು ಜನಿಸಿದ ದೀಪಕ್ ಮಿಶ್ರಾ ಅವರು, 1977ರ ಫೆಬ್ರವರಿ 14ರಂದು ವಕೀಲರಾಗಿ ಸೇವೆ ಆರಂಭಿಸಿದರು. ಸಿವಿಲ್, ಕ್ರಿಮಿನಲ್, ಕಂದಾಯ, ಸೇವಾ ತೆರಿಗೆ ಮುಂತಾದ ಪ್ರಕರಣಗಳಲ್ಲಿ ಓಡಿಸ್ಸಾ ಹೈಕೋರ್ಟ್‍ನಲ್ಲಿ ವಾದ ಮಂಡಿಸಿದ್ದಾರೆ. ದೀಪಕ್ ಮಿಶ್ರಾ ಅವರು ಓಡಿಸ್ಸಾ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ 1996ರ ಜನವರಿ 17ರಂದು ನೇಮಕವಾದರು. ಮಾರ್ಚ್ 3, 1997ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‍ಗೆ ವರ್ಗಾವಣೆಗೊಂಡರು.

ಡಿಸೆಂಬರ್ 19, 1997ರಲ್ಲಿ ಅವರು ಖಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಡಿಸೆಂಬರ್ 23, 2009ರಲ್ಲಿ ನೇಮಕಗೊಂಡರು. ಮೇ 24, 2010ರಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದರು.

ದೀಪಕ್ ಮಿಶ್ರಾ ಅವರು ಅಕ್ಟೋಬರ್ 10, 2011ರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೀಪಕ್ ಮಿಶ್ರಾ ಓಡಿಸ್ಸಾ ಮೂಲದ ಮೂರನೇ ಮುಖ್ಯನ್ಯಾಯಮೂರ್ತಿಗಳು. ಹಿಂದೆ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ, ಜಿ.ಬಿ.ಪಟ್ನಾಯಕ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು.

-ಎನ್.ಬಿ.

Leave a Reply

comments

Related Articles

error: