ಮೈಸೂರು

ಸರ್ಕಾರ ಪೌರಕಾರ್ಮಿಕರಿಗೋಸ್ಕರ ನೂತನ ಯೋಜನೆಗಳನ್ನು ಪರಿಚಯಿಸಿದೆ: ಡಾ. ಮಹದೇವಪ್ಪ

ಮೈಸೂರು ಪುರಭವನದಲ್ಲಿ ಮಹಾನಗರಪಾಲಿಕೆ ವತಿಯಿಂದ ಸೋಮವಾರ ಅಂಬೇಡ್ಕರ್ ಅವರ 125ನೇ ಜನ್ಮದಿನೋತ್ಸವವನ್ನು ಆಚರಿಸಲಾಯಿತು.

ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪುರಭವನದ ಎದುರು ಇರುವ ಅಂಬೇಡ್ಕರ್ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು ಅಂಬೇಡ್ಕರ್ ಯಾವತ್ತೂ ಅಭಿವೃದ್ಧಿಗೆ ಒತ್ತು ನೀಡಿದವರು. ಸಮಾಜದ ಕೊನೆಯ ವ್ಯಕ್ತಿಯವರೆಗೂ ಅಭಿವೃದ್ಧಿಯು ತಲುಪಬೇಕು ಎಂದು ಆಶಿಸಿದವರು. ಹಕ್ಕುಗಳ ಹೋರಾಟಕ್ಕಾಗಿ ಸಂವಿಧಾನವನ್ನೇ ರಚಿಸಿದರು. ಮಹಾನಗರಪಾಲಿಕೆ ಅಂಥವರ ಜನ್ಮದಿನಾಚರಣೆಯನ್ನು ನಡೆಸುವ ಮೂಲಕ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಪೌರಕಾರ್ಮಿಕರು ನಗರವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಾರೆ. ಅವರ ಕೆಲಸದಿಂದಲೇ ಗುರುತಿಸಿಕೊಳ್ಳುತ್ತಾರೆ. ಹಲವು ದೇಶಗಳು ಅವರಿಗೋಸ್ಕರವೇ ಒಂದು ದಿನವನ್ನು ಮೀಸಲಿಟ್ಟು ಆಚರಣೆ ನಡೆಸುತ್ತಿವೆ. ಎಲ್ಲೆಡೆಯೂ ಪೌರಕಾರ್ಮಿಕರ ದಿನವನ್ನು ಆಚರಿಸುವಂತಾಗಬೇಕು ಎಂದರು. ಅವರಿಗೋಸ್ಕರ ಕಾಂಗ್ರೆಸ್ ಸರ್ಕಾರ ಹಲವು ನೂತನ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಮುಂದೆಯೂ ನಡೆಸಲಿದೆ. ಅವರ ಜೀವನ ಸುಧಾರಿಸಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು. ಮೈಸೂರಿಗೆ ಎರಡೆರಡು ಬಾರಿ ಸ್ವಚ್ಛನಗರಿ ಎಂಬ ಪ್ರಶಸ್ತಿ ದೊರಕಿದೆ. ಆ ಪ್ರಶಸ್ತಿಯ ಹಿಂದೆ ಪೌರಕಾರ್ಮಿಕರ ಶ್ರಮ ಅಡಗಿದೆ ಎಂದರು.

ಈ ವೇಳೆ ಡಾ. ಕೃಷ್ಣಮೂರ್ತಿ ಚಮರಂ ವಿರಚಿತ ಭಾರತೀಯರೆಲ್ಲರ ಮಹಾ ಬೆಳಕು ಬಾಬಾ ಸಾಹೇಬ್ ಅಂಬೇಡ್ಕರ್ ಪುಸ್ತಕವನ್ನು ಮೇಯರ್ ಬಿ.ಎಲ್ ಭೈರಪ್ಪ ಬಿಡುಗಡೆಗೊಳಿಸಿದರು. ಪೌರಕಾರ್ಮಿಕರಿಗೆ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.  ಸ್ವಚ್ಛ ನಗರಿಗೆ ಸಹಕರಿಸಿದ ಪೌರಕಾರ್ಮಿಕರೆಲ್ಲರನ್ನೂ ಅಭಿನಂದಿಸುವ ಸಲುವಾಗಿ ಪ್ರತಿ ವಾರ್ಡಿನ ಓರ್ವ ಪೌರಕಾರ್ಮಿಕ ಪ್ರತಿನಿಧಿಯನ್ನು ನಗರಪಾಲಿಕೆಯಿಂದ ಸನ್ಮಾನಿಸಲಾಯಿತು.

ಮೇಯರ್ ಬಿ.ಎಲ್. ಭೈರಪ್ಪ, ಉಪಮೇಯರ್ ವನಿತಾ ಪ್ರಸನ್ನ, ಶಾಸಕ ವಾಸು, ಆಯುಕ್ತ  ಜಗದೀಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನಂಜನಗೂಡು ಶಾಸಕ ಶ್ರೀನಿವಾಸ ಪ್ರಸಾದ್ ಅವರ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸುನಿಲ್ ಬೋಸ್ ಅವರು ಸ್ಪರ್ಧಿಸಲಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿದೆ. ಸುನಿಲ್ ಸಾರ್ವಜನಿಕರ ಕ್ಷೇಮಾಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಜನರಿಗೆ ಅವರ ನಾಯಕನ ಆಯ್ಕೆಗೆ ಅವಕಾಶವಿದೆ. ಈ ಕುರಿತು ನಾನೇನು ಹೇಳಲಾರೆ. ಮುಂದಿನ ನಡೆ ಹೈಕಮಾಂಡ್‍ಗೆ ಬಿಟ್ಟ ವಿಷಯ ಎಂದರು.

Leave a Reply

comments

Related Articles

error: