
ದೇಶಪ್ರಮುಖ ಸುದ್ದಿ
ರಾಮ್ರಹೀಮ್ ಬಾಬಾಗೆ ಇಂದು ಶಿಕ್ಷೆ ಪ್ರಕಟ : ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡಿಕ್ಕುವಂತೆ ಆದೇಶ
ಹರ್ಯಾಣ, ಆ.28 : ಅತ್ಯಾಚಾರ ಆರೋಪ ಸಾಬೀತಾಗಿರುವ ರಾಮ್ರಹೀಮ್ ಬಾಬಾಗೆ ನ್ಯಾಯಾಲಯವು ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದು, ಬಾಬಾ ಬೆಂಬಲಿಗರು ಹಿಂಸಾಚಾರ ನಡೆಸಿದರೆ ಕಂಡಲ್ಲಿ ಗುಂಡಿಕ್ಕುವಂತೆ ಆದೇಶ ನೀಡಲಾಗಿದೆ.
ಈಗಾಗಲೇ ರಾಮ್ರಹೀಮ್ ಬೆಂಬಲಿಗರ ಗೂಂಡಾಗಿರಿಯಿಂದ ಮೂರು ರಾಜ್ಯಗಳು ನಲುಗಿದ್ದು, ಇಂದು ಕೂಡಾ ಗಲಭೆ ನಡೆಸಲು ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇಷ್ಟೇ ಅಲ್ಲದೆ ಹಿಂಸಾಚಾರಕ್ಕಿಳಿಯುವ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹೊಡೆಯುವಂತೆ ಆದೇಶ ನೀಡಲಾಗಿದೆ.
ರೋಹ್ಟಕ್ನ ಜಿಲ್ಲೆಯ ಅಜ್ಞಾತ ಸ್ಥಳವೊಂದರಲ್ಲಿ 15 ಸಾವಿರಕ್ಕೂ ಹೆಚ್ಚು ಬಾಬಾರ ಮಂದಿ ಅವಿತಿದ್ದಾರೆ ಎಂದು ಹರ್ಯಾಣ ಸರ್ಕಾರಕ್ಕೆ ಗುಪ್ತಚರ ಇಲಾಖೆ ವರದಿ ಮಾಡಿದ್ದು, ಭಾರೀ ಕಟ್ಟೆಚ್ಚರದ ನಡುವೆಯೂ ಹಿಂಸಾಚಾರ ಭುಗಿಲೇಳುವ ಆತಂಕ ಎದುರಾಗಿದೆ. ಇಷ್ಟಾದರೂ ನಿಯಮ ಉಲ್ಲಂಘಿಸಿ ಹಿಂಸಾಚಾರಕ್ಕಿಳಿಯುವ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹಾರಿಸುವ ಆದೇಶವನ್ನೂ ಹೊರಡಿಸಲಾಗಿದೆ. ಮೊನ್ನೆ ನಡೆದ ಹಿಂಸಾಚಾರದಲ್ಲಿ ಹಲವಾರು ಮಂದಿ ಅಮಾಯಕರು ಮೃತಪಟ್ಟ ಕಾರಣ ಕಂಡಲ್ಲಿ ಗುಂಡಿಕ್ಕುವ ಕಠಿಣ ಆದೇಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ ಬಾಬಾಗೆ ವಿಧಿಸಲಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ಕುತೂಹಲ ಹೆಚ್ಚಾಗಿದೆ. 3 ರಿಂದ 7 ವರ್ಷಗಳ ಜೈಲು ಶಿಕ್ಷೆಯನ್ನು ಬಾಬಾಗೆ ವಿಧಿಸಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
-ಎನ್.ಬಿ.