ಮೈಸೂರು

ಸ್ವಾತಂತ್ರ್ಯ ಪೂರ್ವದಲ್ಲೇ ಭಾರತ ವಿಶ್ವಗುರುವಾಗಿತ್ತು: ಬನ್ನೂರು ರಾಜು

ಮೈಸೂರು, ಆ.೨೮: ಸಹಸ್ರಾರು ವರ್ಷಗಳ ಸುದೀರ್ಘ ಚರಿತ್ರೆಯುಳ್ಳ, ಸುಮಾರು ಐನೂರು ಐವತ್ತಕ್ಕೂ ಹೆಚ್ಚು ಸಂಸ್ಥಾನಗಳನ್ನು ಹೊಂದಿದ್ದ ನಮ್ಮ ಭಾರತವು ಸ್ವಾತಂತ್ರ್ಯ ಪೂರ್ವದಲ್ಲೇ ಜಗತ್ತಿಗೆ ಜ್ಞಾನ ನೀಡುವ ವಿಶ್ವಗುರುವಾಗಿತ್ತು. ಇಂತಹ ದೇಶ ಒಗ್ಗಟ್ಟಿಲ್ಲದೆ ಒಳಜಗಳಗಳಿಂದಾಗಿ, ದ್ವೇಷಾಸೂಯೆಯ ಕದನಗಳಿಂದಾಗಿ ಹೊಟ್ಟೆಪಾಡಿಗೆ ವ್ಯಾಪಾರಕ್ಕೆ ಬಂದ ಬ್ರಿಟಿಷರ ಗುಲಾಮಗಿರಿಗೆ ಸಿಲುಕಿದ್ದು ದೇಶದ ಬಹುದೊಡ್ಡ ದುರಂತವೆಂದು ಸಾಹಿತಿ ಬನ್ನೂರು ಕೆ. ರಾಜು ವಿಷಾದ ವ್ಯಕ್ತಪಡಿಸಿದರು.

ಸುವರ್ಣ ಕರ್ನಾಟಕ ಜನಪರ ವೇದಿಕೆಯು ಯರಗನಹಳ್ಳಿಯ ಉರ್ದು ಶಿಕ್ಷಕರ ಬಡಾವಣೆಯಲ್ಲಿ ಸ್ವಾಂತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹೊರಗಿನ ಬ್ರಿಟಿಷರಿಂದ ದೇಶ ಸ್ವತಂತ್ರವಾಗಿದ್ದರೂ ಸಹ ಒಳಗಿನ ಆಳುವ ವರ್ಗದ ಭ್ರಷ್ಟಾಚಾರದ ಕಪಿಮುಷ್ಠಿಯಲ್ಲಿ ಭಾರತ ಇಂದಿಗೂ ಬಂಧಿಸಲ್ಪಟ್ಟಿದೆ. ಹಾಗಾಗಿ ನಿಜವಾದ ಆಂತರಿಕ ಸ್ವಾತಂತ್ರ್ಯ ಸಾಮಾನ್ಯ ಜನರಿಗೆ ಇನ್ನೂ ಲಭ್ಯವಾಗಿಲ್ಲ. ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಭ್ರಷ್ಟಾಚಾರ, ಹಣ, ಆಸ್ತಿಗಾಗಿ ಕಿತ್ತಾಟ, ಕಾದಾಟ, ದೇಶದ ಸಂಪನ್ಮೂಲವೆಲ್ಲಾ ಕೆಲವೇ ಮಂದಿ ಭ್ರಷ್ಟರ ಪಾಲಾಗುತ್ತಿದೆ. ಇಡೀ ಜಗತ್ತನ್ನೇ ಸಾಕುವಷ್ಟು ಸಂಪನ್ಮೂಲ ನಮ್ಮ ದೇಶದಲ್ಲುಂಟು. ದುರಂತವೆಂದರೆ ಇಂತಹ ಸಂಪದ್ಭರಿತ ದೇಶದಲ್ಲಿ ಇಂದು ಬದುಕು ಕಟ್ಟಿ ಕೊಳ್ಳಲಾರದೆ ಭ್ರಷ್ಟಾಚಾರಕ್ಕೆ ಹೆದರಿ ಅದೆಷ್ಟೋ ಪ್ರತಿಭೆಗಳು ವಿದೇಶಗಳತ್ತ ಮುಖಮಾಡುತ್ತಿವೆ. ಇದಕ್ಕಿಂತ ವಿಪರ್ಯಾಶ ಬೇಕೆ? ಹೊರಗಿನ ಶತ್ರುಗಳಿಗಿಂತ ನಮ್ಮೊಳಗಿರುವ ಭ್ರಷ್ಟಾಚಾರದ ಭೂತದಿಂದ ನಮ್ಮ ಭಾರತ ದೇಶವನ್ನು ಉಳಿಸಬೇಕಾಗಿದೆ ಎಂದರು.

ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಬಿ.ಶ್ಯಾಮಸುಂದರ್ ಮತ್ತು ಅಂಧರಾಗಿದ್ದುಕೊಂಡೇ ಪಿ.ಎಚ್.ಡಿ. ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಉಪನ್ಯಾಸಕ ಡಾ. ಮಂಜುನಾಥ್ ಹಾಗೂ ಸಾಹಿತಿ ಬನ್ನೂರು ಕೆ. ರಾಜು ಅವರನ್ನು ವೇದಿಕೆ ಸನ್ಮಾನಿಸಲಾಯಿತು.ವತಿಯಿಂದ ಮೈಸೂರು ಪೇಟ ತೊಡಿಸಿ, ಫಲ ತಾಂಬೂಲ ಹಾರ ತುರಾಯಿಯೊಡನೆ ಶಾಲು ಹೊದಿಸಿ ಅತ್ಯಂತ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್. ಮಾದೇಗೌಡ, ಸುವರ್ಣ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷೆ ಪಿ. ಲತಾಶ್ರೀನಿವಾಸ್, ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದ ಸಂಸ್ಥಾಪಕ ಹೆಚ್.ಜಿ. ಗಿರಿಧರ್, ಎಸ್.ಎಂ.ಪಿ. ಫೌಂಡೇಷನ್ ಅಧ್ಯಕ್ಷ ಎಸ್.ಎಂ. ಶಿವಪ್ರಕಾಶ್, ಗೌಡಾಸ್ ಹೋಟೆಲ್ ಮಾಲೀಕ ದೀಪಕ್, ಎಸ್.ಕೆ. ಗ್ರೂಪ್ಸ್‌ನ ವೈ.ಕೆ. ದಿನೇಶ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: