ಕರ್ನಾಟಕಪ್ರಮುಖ ಸುದ್ದಿ

ಮನುಷ್ಯನ ಅಂತರಂಗ ಶುದ್ದವಾಗಬೇಕಾದರೆ ಕ್ರೋಧವನ್ನು ತ್ಯಜಿಸಬೇಕು : ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ರಾಜ್ಯ(ಹಾಸನ)ಆ.28:- ಮನುಷ್ಯನ ಅಂತರಂಗ ಶುದ್ದವಾಗಬೇಕಾದರೆ ಮೊದಲು ತನ್ನಲ್ಲಿರುವ ಕ್ರೋಧವನ್ನು ತ್ಯಜಿಸಬೇಕು. ಇದರಿಂದ ಮನುಷ್ಯನ ಜೀವನ ಸಾರ್ಥಕಗೊಳ್ಳುತ್ತದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಶ್ರವಣಬೆಳಗೊಳ ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಆಯೋಜಿಸಿದ್ದ ದಶಲಕ್ಷಣ ಮಹಾಪರ್ವದ ಪ್ರಥಮ ದಿನದ ಉತ್ತಮ ಕ್ಷಮಾ ಧರ್ಮ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಧರ್ಮ, ಆಧ್ಯಾತ್ಮದಲ್ಲಿ ಧ್ಯಾನದಿಂದ ಅತ್ಯಂತ ಶ್ರದ್ಧಾ ಭಕ್ತಿಯಿಂದ ಉಪವಾಸ, ವ್ರತ, ಪೂಜೆ, ತಪಸ್ಸಗಳನ್ನು ಕೈಗೊಂಡರೆ ಅದ್ಭುತವಾದ ಯಶಸ್ಸು ಲಭಿಸುವುದರ ಜತೆಗೆ, ಮನುಷ್ಯ ಆದರ್ಶ ವ್ಯಕ್ತಿಯಾಗುತ್ತಾನೆ. ಪಂಚಮ ಕಾಲದಲ್ಲಿ ಸಮವಸರಣ ಅರಹಂತ ಭಗವಾನರ ಎದುರಿನಲ್ಲಿ ಆಚಾರ್ಯರು, ಮುನಿಗಳ ಸಾನಿಧ್ಯ ದೊರಕಿಸುವುದು ಈ ಬಾರಿಯ ದಶಲಕ್ಷಣ ಮಹಾಪರ್ವದ ಆಚರಣೆಯಲ್ಲಿ ಎಲ್ಲರ ಸೌಭಾಗ್ಯವಾಗಿದೆ ಎಂದು ಹೇಳಿದರು.

ಮೋಕ್ಷ ಶಾಸ್ತ್ರದ ತತ್ವರ್ಥ ಸೂತ್ರದ ಪಠಣವನ್ನು ಹಿತೇಂದ್ರಸಾಗರ ಮಹಾರಾಜರು ವಾಚಿಸಿದರು. ಆಚಾರ್ಯ ವರ್ಧಮಾನಸಾಗರ ಮಹಾರಾಜರು ತತ್ವಾರ್ಥ ಸೂತ್ರದ ಅರ್ಥವನ್ನು ಭಾವಾರ್ಥ ಸಹಿತವಾಗಿ ವಿವರಿಸಿದರು. ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ಭಂಡಾರ ಬಸದಿಯಲ್ಲಿ 24 ತೀರ್ಥಂಕರರಿಗೆ ಏಕ ಕಾಲದಲ್ಲಿ ಕಲ್ಪದ್ರುಮ ಮಹಾಮಂಡಲ ಪೂಜೆಯನ್ನು ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿಸಲಾಯಿತು. ಮಧ್ಯಾಹ್ನ ಚಾವುಂಡರಾಯ ಸಭಾ ಮಂಟಪದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಿನವಾಣಿ ಸರಸ್ವತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕಳಶ ಹೊತ್ತ ಶ್ರಾವಕಿಯರು ಮೆರವಣಿಗೆಯಲ್ಲಿ ಬಂದು ಸಮವಸರಣದಲ್ಲಿ ಪ್ರತಿಷ್ಠಾಪಿಸಿದ್ದ ಅರಿಹಂತ ಭಗವಾನರ ಮುಂಭಾಗದಲ್ಲಿ ಆಚಾರ್ಯ ವರ್ಧಮಾನಸಾಗರ ಮಹಾರಾಜರಿಗೆ ಶಾಸ್ತ್ರವನ್ನು ಸಮರ್ಪಿಸಿದರು. ನಂತರ ಶಾಸ್ತ್ರಕ್ಕೆ ಅಷ್ಠವಿಧಾರ್ಚನೆ ಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಆಚಾರ್ಯ ವಾಸುಪೂಜ್ಯಸಾಗರ ಮಹಾರಾಜರು, ಆಚಾರ್ಯ ಪಂಚಕಲ್ಯಾಣಕಸಾಗರ ಮಹಾರಾಜರು, ಆಚಾರ್ಯ ಚಂದ್ರಪ್ರಭಸಾಗರ ಮಹಾರಾಜರು, ಮುನಿಶ್ರೀ ಅಮಿತಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿಗಳು ಮತ್ತು ಮಾತಾಜಿಯವರು ಪಾವನ ಸಾನಿಧ್ಯ ವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: