ಮೈಸೂರು

ಜಿಲ್ಲಾಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ನೀರಿನ ಸಮಸ್ಯೆ

ಮೈಸೂರು ಜಿಲ್ಲೆಯಲ್ಲಿ ನೀರಿನ ಅಭಾವ ಎದುರಾಗಿದ್ದು ಜನತೆ ಸಂಕಷ್ಟಕ್ಕೀಡಾಗಿದ್ದಾರೆ ಎನ್ನುವ ಮಾತುಗಳು ಸೋಮವಾರ ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಎರಡನೇ ಸಾಮಾನ್ಯ ಸಭೆಯಲ್ಲಿ ಎಲ್ಲರೂ ನೀರಿನ ಕುರಿತಾಗಿಯೇ ಧ್ವನಿಯೆತ್ತಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಮಂಗಲಾ ಸೋಮಶೇಖರ್ ಮಾತನಾಡಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕೆರೆಗಳು ಬರಿದಾಗಿವೆ. ಕೆರೆಗಳಲ್ಲಿ ನೀರು ತುಂಬಿಸಿದರೆ ಮಾತ್ರ ಕುಡಿಯಲು ನೀರು ಸಿಗಲಿದೆ. ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಂಡು ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ  ಒದಗಿಸಬೇಕಿದೆ ಎಂದರು. ಶುದ್ಧ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಎಲ್ಲಿ ಸ್ಥಾಪನೆ ಆಗಲಿದೆ ಎನ್ನುವುದರ ಯಾವ ಮಾಹಿತಿಯನ್ನೂ ಸದಸ್ಯರಿಗೆ ನೀಡಿಲ್ಲ ಎಂದು ತಿಳಿಸಿದರು.

ಇನ್ನೋರ್ವ ಸದಸ್ಯ ವೆಂಕಟಸ್ವಾಮಿ ಮಾತನಾಡಿ ಹೆಚ್.ಡಿ.ಕೋಟೆಯಲ್ಲಿ ನಾಲ್ಕು ಡ್ಯಾಂಗಳಿವೆ. ಆದರೆ ಯಾವುದರಲ್ಲಿಯೂ ನೀರಿಲ್ಲ. ಅಂತರ್ಜಲ ಕುಸಿದಿದೆ. ನೀರಿಲ್ಲದೇ ಜನರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ನೀರು ಪೂರೈಕೆಗೆ ಹೊಸ ಕಾರ್ಯ ರೂಪಿಸಬೇಕು ಎಂದರು. ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. 400ಶಿಕ್ಷಕರ ಅವಶ್ಯಕತೆ ಇದೆ. ಆದರೆ ಇರುವ ಶಿಕ್ಷಕರನ್ನೇ ವರ್ಗ ಮಾಡಲಾಗುತ್ತಿದೆ. ಇಲ್ಲಿ ಆದಿವಾಸಿ ಕುಟುಂಬಗಳಿದ್ದು ಅವರ ಮಕ್ಕಳಿಗೆ ಶಿಕ್ಷಣ ದೊರಕಬೇಕು. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೂ ಒಬ್ಬರೇ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಸಿಗದಿರುವ ಹಿನ್ನೆಲೆಯಲ್ಲಿ ಜನತೆ ಊರು ಬಿಟ್ಟು ಹೋಗುತ್ತಿದ್ದಾರೆ. ಕೂಡಲೇ ಶಿಕ್ಷಕರ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿ ಹುಂಡಿ ಬಸವಣ್ಣ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಬಾರಿ ಮಳೆ ಕಡಿಮೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ  ಏಳು ತಾಲೂಕುಗಳು ಬರಪೀಡಿತವಾಗಿವೆ. ಕುರಹಟ್ಟಿ, ಲಕ್ಷ್ಮಣಪುರ ಗ್ರಾಮದಲ್ಲಿ ಕೊಳವೆ ಬಾವಿ ತೆಗೆದರೂ ನೀರು ಬಂದಿಲ್ಲ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯುಕ್ತ ಶಿವಶಂಕರ, ಉಪಾಧ್ಯಕ್ಷ  ನಟರಾಜು, ಸರ್ವ ಸದಸ್ಯರು ಉಪಸ್ಥಿತರಿದ್ದರು.

 

Leave a Reply

comments

Related Articles

error: