ಕರ್ನಾಟಕ

ಕೊಡಗಿನಲ್ಲಿ ಎಡೆಬಿಡದ ಮಳೆ : ಮಡಿಕೇರಿಯಲ್ಲಿ ದಟ್ಟ ಮಂಜು, ಮೈಕೊರೆಯುವ ಚಳಿ

ಮಡಿಕೇರಿ ಆ.28 : ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆಯಾಗುತ್ತಿದ್ದು, ನದಿ, ತೊರೆ, ಜಲಪಾತಗಳು ತುಂಬಿ ಹರಿಯುತ್ತಿವೆ. ಮಡಿಕೇರಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ದಟ್ಟ ಮಂಜಿನೊಂದಿಗೆ ಮೈಕೊರೆಯುವ ಚಳಿ ಆವರಿಸಿದೆ. ಕಳೆದ ವರ್ಷ ಬರದಿಂದ ಬಳಲಿದ ಕೊಡಗು ಜಿಲ್ಲೆಗೆ ಈ ಬಾರಿ ಮುಂಗಾರು ಒಂದು ತಿಂಗಳು ತಡವಾಗಿ ಪ್ರವೇಶಿಸಿದೆ. ಜುಲೈ ತಿಂಗಳಿನಲ್ಲಿ ಸಾಧಾರಣ ಮಳೆಯನ್ನು ಕಂಡಿದ್ದ ಜಿಲ್ಲೆ ಆಗಸ್ಟ್ ತಿಂಗಳ ಮಧ್ಯ ಭಾಗದಿಂದ ಆಶಾದಾಯಕ ಮಳೆಯಲ್ಲಿ ಮಿಂದಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯ ಮೂರು ತಾಲ್ಲೂಕುಗಳಾದ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆಯ ಗ್ರಾಮೀಣ ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಿದೆ.

ಅತಿ ಹೆಚ್ಚು ಮಳೆಯಾಗುವ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ದಟ್ಟ ಮಂಜಿನೊಂದಿಗೆ ಉತ್ತಮ ಮಳೆಯಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಹರಿವು ಹೆಚ್ಚಾಗಿದೆ. ಕುಶಾಲನಗರ ಹಾಗೂ ದಕ್ಷಿಣ ಕೊಡಗಿನಲ್ಲು ಮಳೆಯಾಗುತ್ತಿದೆ. ಮಡಿಕೇರಿ ನಗರದಲ್ಲಿ ದಟ್ಟ ಮಂಜು, ಚಳಿಯೊಂದಿಗಿನ ಮಳೆ ಪ್ರವಾಸಿಗರಿಗೆ ಹೆಚ್ಚು ಹಿತವೆನಿಸುತ್ತಿದ್ದು, ಮಳೆಯ ಮಜಾ ಅನುಭವಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಮಂಜಿನಿಂದ ಮುಚ್ಚಿ ಹೋಗಿರುವ ರಾಜಾಸೀಟು ಉದ್ಯಾನವನ ಹಾಗೂ ದುಮ್ಮಿಕ್ಕಿ ಹರಿಯುತ್ತಿರುವ ಅಬ್ಬಿಜಲಪಾತವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಆದರೆ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಸ್ಥಳೀಯ ನಿವಾಸಿಗಳ ಕೆಲಸ, ಕಾರ್ಯಗಳಿಗೆ ಅಡ್ಡಿಯಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಕಷ್ಟಪಡುತ್ತಿದ್ದಾರೆ. ಪಟ್ಟಣ ಪ್ರದೇಶದ ಮಕ್ಕಳಿಗೆ ಮೈಕೊರೆಯುವ ಚಳಿ ಕಷ್ಟವೆನಿಸಿದೆ.

ಹವಾಗುಣದ ಏರುಪೇರಿನಿಂದ ಅನಾರೋಗ್ಯವೂ ಕಾಡುತ್ತಿದ್ದು, ಶೀತ, ಜ್ವರದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಗಾಳಿಯ ವಾತಾವರಣ ಇಲ್ಲದೆ ಇರುವುದರಿಂದ ಯಾವುದೇ ಆಸ್ತಿಪಾಸ್ತಿ ನಷ್ಟವಾಗಿಲ್ಲ. ಆದರೆ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಎತ್ತರದ ಪ್ರದೇಶ ಹಾಗೂ ತಗ್ಗು ಪ್ರದೇಶದಲ್ಲಿರುವ ನಿವಾಸಿಗಳು ಬರೆ ಕುಸಿಯುವ ಆತಂಕವನ್ನು ಎದುರಿಸುತ್ತಿದ್ದಾರೆ.  ನಿರಂತರ ಮಳೆ ಕಾಫಿ ಬೆಳೆಗೆ ಹಾನಿಯುಂಟು ಮಾಡುವ ಸಾಧ್ಯತೆಗಳಿದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಸಕಾಲದಲ್ಲಿ ಸಮರ್ಪಕವಾಗಿ ಮಳೆಯಾಗಿದ್ದರೆ ಎಲ್ಲವೂ ಸಮೃದ್ಧಿಯಾಗಿರುತ್ತಿತ್ತು ಎನ್ನುವುದು ಗ್ರಾಮೀಣ ಜನರ ಅಭಿಪ್ರಾಯವಾಗಿದೆ. (ವರದಿ: ಕೆಸಿಐ, ಎಲ್.ಜಿ)

 

Leave a Reply

comments

Related Articles

error: