ದೇಶಪ್ರಮುಖ ಸುದ್ದಿ

ಹಣಕಾಸು ವಿಧೇಯಕದಲ್ಲಿ ಆಧಾರ್ ಸೇರ್ಪಡೆಗೆ ಆಕ್ಷೇಪ : ಸುಪ್ರೀಂ ಮುಂದೆ ಜೈರಾಮ್ ರಮೇಶ್ ಅಪೀಲು

ನವದೆಹಲಿ, ಆಗಸ್ಟ್ 29 (ಪ್ರಮುಖ ಸುದ್ದಿ) : ಕೇಂದ್ರ ಸರ್ಕಾರವು ಹಣಕಾಸು ವಿಧೇಯಕದೊಳಗೆ ವ್ಯಕ್ತಿಗಳ ಖಾಸಗಿತಕ್ಕೆ ಸಂಬಂಧಿಸಿದ ಆಧಾರ್ ವಿಧೇಯಕವನ್ನು ಸೇರಿಸಿ ಅಂಗೀಕಾರ ಪಡೆದಿರುವುದರ ಸಿಂಧುತ್ವ ಪ್ರಶ್ನಿಸಿ ತಾವು ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರು ಇಂದು ಸುಪ್ರೀಂ ಕೋರ್ಟ್ನಲ್ಲಿ ಅಪೀಲು ಸಲ್ಲಿಸಿದರು.

ಕೇಂದ್ರದ ಮತ್ತೋರ್ವ ಮಾಜಿ ಸಚಿವ ಮತ್ತು ಸುಪ್ರೀಂ ಕೋರ್ಟ್ ವಕೀಲರಾದ ಪಿ.ಚಿದಂಬರಂ ಅವರು ಜೈರಾಮ್ ರಮೇಶ್ ಅವರ ಪರವಾಗಿ ಇಂದು ವಾದ ಮಂಡಿಸಿದರು. ವಾದ ಆಲಿಸಿದ ನೂತನ ಮುಖ್ಯನ್ಯಾಯಮೂರ್ತಿ ದೀಪಕ್ಮಿಶ್ರಾ ಅವರು, ಆಧಾರ್ ಬಿಲ್‍ ಅನ್ನು ಹಣಕಾಸು ಮಸೂದೆಯೊಳಗೆ ಸೇರಿಸಿ ಒಪ್ಪಿಗೆ ಪಡೆಯುವಾಗ ವ್ಯಕ್ತಿಗಳ ಖಾಸಗಿತನಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ನ ತೀರ್ಪು ಹೊರಬಿದ್ದಿರಲಿಲ್ಲ. ಇದೀಗ ತೀರ್ಪು ಹೊರಬಿದ್ದಿದ್ದು ಮತ್ತೊಮ್ಮೆ ಕೇಂದ್ರ ಸರ್ಕಾರ ಈ ಕುರಿತು ಅವಲೋಕಿಸಬೇಕಿದೆ. ಶುಕ್ರವಾರದೊಳಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಏನಿದೆ ಎಂಬುದನ್ನು ತಿಳಿದು ನಂತರ ನ್ಯಾಯಾಲಯವು ಈ ವಿಷಯದ ವಿಚಾರಣೆಯನ್ನು ಕೈಗೊತ್ತಿಕೊಳ್ಳಲಿದೆ ಎಂದು ತಿಳಿಸಿದರು.

2006ರ ಮಾರ್ಚ್ 11ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಅವರು “ಆಧಾರ್ ವಿಧೇಯಕ-2016”ಕ್ಕೆ ಸಂಸತ್ತಿನ ಒಪ್ಪಿಗೆ ಪಡೆದಿದ್ದರು. ಈ ವಿಧೇಯಕದ ಪ್ರಕಾರ ದೇಶದ ಪ್ರತಿಯೊಬ್ಬ ವ್ಯಕ್ತಿಯು ಯಾವುದೇ ಹಣಕಾಸು ಅಥವಾ ಸರ್ಕಾರಿ ಸಬ್ಸಿಡಿಯಂಥ ಸವಲತ್ತು ಪಡೆಯಲು ಆಧಾರ್ ಕಾರ್ಡ್ ವಿವರ ಸಲ್ಲಿಸುವುದು ಕಡ್ಡಾಯವಾಗಿದೆ.

-ಎನ್.ಬಿ.

Leave a Reply

comments

Related Articles

error: