ಕರ್ನಾಟಕಪ್ರಮುಖ ಸುದ್ದಿ

ಸಮುದಾಯ ಭವನಕ್ಕೆ ಬಿಡುಗಡೆಯಾದ 7.34ಲಕ್ಷ ರೂ ಸರ್ಕಾರದ ಅನುದಾನ ಹಣವನ್ನು ಶಾಸಕರ ಬೆಂಬಲಿಗರು ದುರ್ಬಳಕೆ ಮಾಡಿದ್ದಾರೆ: ಡಾಲು ರವಿ ಆರೋಪ

ರಾಜ್ಯ(ಮಂಡ್ಯ)ಆ.29:- ಶಾಸಕ ನಾರಾಯಣಗೌಡ ಅವರ ಹುಟ್ಟೂರು ಕೈಗೋನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನಕ್ಕೆ ಬಿಡುಗಡೆಯಾದ 7.34ಲಕ್ಷ ರೂ ಸರ್ಕಾರದ ಅನುದಾನ ಹಣವನ್ನು ಶಾಸಕರ ಬೆಂಬಲಿಗರು ದುರ್ಬಳಕೆ ಮಾಡಿರುವುದು ಸತ್ಯವಾಗಿದ್ದು ಇದನ್ನು ಸಾಬೀತು ಪಡಿಸಲು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಆಣೆ-ಪ್ರಮಾಣ ಮಾಡಲು ತಾವು ಸಿದ್ದ, ಇದನ್ನು ಶಾಸಕರು ದುರ್ಬಳಕೆ ಮಾಡಿಲ್ಲ ಎನ್ನುವುದಾದರೆ ಅವರು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಮನ್‍ಮುಲ್ ನಿರ್ದೇಶಕ ಡಾಲು ರವಿ ಸವಾಲು ಹಾಕಿದರು.
ಅವರು ಕೆ.ಆರ್.ಪೇಟೆ  ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಗ್ರಾಮದ ಮುಖಂಡರ ಸಭೆಯಲ್ಲಿ ಈ ಹಣ ದುರ್ಬಳಕೆಯಾಗಿರುವ ಆರ್.ಟಿ.ಐ ಮೂಲಕ ತಾವು ಪಡೆದ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಿ  ತಾವು ದೇವಸ್ಥಾನ ಹಾಗೂ ಸಮುದಾಯದ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಇರುವ ವಾಸ್ತವಾಂಶವನ್ನು ದಾಖಲೆಗಳ ಸಮೇತ ಶಾಸಕರು ತಮ್ಮ ಬೆಂಬಲಿಗರ ಮೂಲಕ ಹಣ ದುರ್ಬಳಕೆ ಮಾಡಿಕೊಂಡಿರುವ ವಿಚಾರವನ್ನು ಬಯಲಿಗೆಳೆಯಲಾಗಿದೆ. ಆದರೆ ಶಾಸಕರು ಟ್ರಸ್ಟ್ ಪದಾಧಿಕಾರಿಗಳ ಮೂಲಕ ಇದೊಂದು ರಾಜಕೀಯ ಪ್ರೇರಿತ ಆರೋಪ ಎಂದು ಹೇಳಿಕೆ ಕೊಡಿಸಿದ್ದಾರೆ. ಶಾಸಕರು ಸಮುದಾಯ ಭವನಕ್ಕೆ ಈ ಹಿಂದೆ 5ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಟ್ರಸ್ಟ್ ನ ಯಾವುದೇ ಪದಾಧಿಕಾರಿಗಳಿಗೆ ತಿಳಿಯದಂತೆ ಗುತ್ತಿಗೆದಾರರಾಗಿರುವ ತಾ.ಪಂ.ಸದಸ್ಯ ಮಲ್ಲೇನಹಳ್ಳಿ ಮೋಹನ್ ಅವರ ಹೆಸರಿಗೆ ಫೆ.15ನೇ 2014ರಲ್ಲಿ ಹಾಗೂ ಎಪಿಎಂಸಿ ನಿರ್ದೇಶಕ ಚಂದ್ರಹಾಸ್ ಎಂಬುವವರ ಹೆಸರಿನಲ್ಲಿ ಜುಲೈ 01ನೇ 2015ರಲ್ಲಿ ತಲಾ 3.67ಲಕ್ಷ ರೂಗಳಂತೆ ಒಟ್ಟು 7.34ಲಕ್ಷ ರೂಗಳನ್ನು ಸಮುದಾಯ ಭವನಕ್ಕೆ ತಮ್ಮ ಶಾಸಕರ ಕ್ಷೇತ್ರಾಭಿವೃದ್ದಿ ನಿಧಿಯಲ್ಲಿ ಬಿಡುಗಡೆ ಮಾಡಿಕೊಳ್ಳಲಾಗಿದೆ. ಈ ವಿಚಾರ ಟ್ರಸ್ಟಿನ ಯಾವುದೇ ಗಮನಕ್ಕೆ ಬಂದಿಲ್ಲ ಇತ್ತೀಚೆಗೆ ಅಂದರೆ ನಾವು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಸಂಗ್ರಹಿಸುತ್ತಿರುವ ವಿಚಾರ ಗೊತ್ತಾಗಿ ಗುತ್ತಿಗೆದಾರ ಮೋಹನ್ ಅವರು ಟ್ರಸ್ಟ್ ನ ಖಜಾಂಚಿ ನಂಜಪ್ಪ ಅವರಿಗೆ 53ಸಾವಿರ ನಗದು ನೀಡಿದ್ದಾರೆ ಹಾಗೂ ಸುಮಾರು 2.37ಲಕ್ಷ ರೂಗಳ ಮೌಲ್ಯದ ಗ್ರಾನೈಟ್ ಕಲ್ಲುಗಳನ್ನು ದಾಸ್ತಾನು ಕೊಡಿಸಿದ್ದಾರೆ. ಅಂದರೆ ಸುಮಾರು 2.90ಲಕ್ಷ ರೂಗಳ ಅನುದಾನದ ಲೆಕ್ಕ ಸಿಕ್ಕಿದೆ. ಉಳಿದ 4.44ಲಕ್ಷ ರೂಗಳಷ್ಟು ಕಣ್ಣಿಗೆ ಕಾಣುವ ಅವ್ಯವಹಾರಕ್ಕೆ ಸಾಕಷ್ಟು ಸಾಕ್ಷಿ ಆಧಾರ, ದಾಖಲೆ-ಪುರಾವೆಗಳಿವೆ ಎಂದು ತಿಳಿಸಿದರು.
ಮಾಜಿ ಸಂಸದೆ ರಮ್ಯಾ ಅವರು ಉಪಚುನಾವಣೆಯಲ್ಲಿ ಗೆದ್ದಿದ್ದಾಗ ಜನರಿಗೆ ಅಭಿನಂದನೆ ಸಲ್ಲಿಸಲು ಗ್ರಾಮದ ಮೂಲಕ ಹೋಗಿದ್ದು ನಿಜ ಆದರೆ ಅವರು ಎಲ್ಲಿಯೂ ಅವರು ಸಮುದಾಯ ಭವನಕ್ಕೆ 5ಲಕ್ಷ ರೂ ಅನುದಾನ ನೀಡುತ್ತೇನೆ ಎಂದು ಹೇಳಿಲ್ಲ ಒಂದು ವೇಳೆ ಹೇಳಿದ್ದರೆ ಅದರ ವಿಡಿಯೋ ನೀಡಿದರೆ ರಮ್ಯ ಪರವಾಗಿ ನಾನು 10ಲಕ್ಷ ರೂ ದೇಣಿಗೆಯನ್ನು ಮಾಜಿ ಸಂಸದೆ ರಮ್ಯಾ ಪರವಾಗಿ ನೀಡಲು ಸಿದ್ದ ಎಂದು  ತಿಳಿಸಿದರು.
ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ರವಿ, ಮುಖಂಡರಾದ ಕೆ.ಎಸ್.ಜಯರಾಂ, ಡಿ.ಸಿ.ಮಂಜೇಗೌಡ, ದಶರಥ, ಗೌಡಸುರೇಶರಾಮು, ನಾಗೇಶ್, ಕೆ.ಕೆ.ಮೋಹನ್, ಕೆ.ಪಿ.ನವೀನ್, ಟ್ರಸ್ಟ್ ಖಜಾಂಚಿ ನಂಜಪ್ಪ, ನಾಗರಾಜು ಇತರರು ಇದ್ದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: