ಮೈಸೂರು

ಶಿಕ್ಷಣ ವಾಣಿಜ್ಯ ಉದ್ದಿಮೆಯಾಗಿ ಪರಿವರ್ತನೆಯಾಗಿದೆ : ಮಾರ್ಗರೇಟ್ ಆಳ್ವಾ ವಿಷಾದ

ಶಿಕ್ಷಣ ಸಂಸ್ಥೆಗಳು ಗಲ್ಲಿಗಲ್ಲಿಗೂ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿದ್ದು, ವಾಣಿಜ್ಯ ಉದ್ದಿಮೆಯಾಗಿ ಪರಿವರ್ತನೆಯಾಗಿ ಬಿಟ್ಟಿವೆ ಎಂದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ವಿಷಾದ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ನಡೆದ 2ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಮಾಣಪತ್ರ ವಿತರಿಸಿ ಮಾರ್ಗರೇಟ್ ಆಳ್ವ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಪ್ರತಿಭೆ ಇಲ್ಲದ ವಿದ್ಯಾರ್ಥಿಗಳಿಗೆ ಮಣೆ ಹಾಕುವ ಮೂಲಕ ವಂತಿಕೆ ಸಂಗ್ರಹಿಸುತ್ತಿದೆ. ಶಿಕ್ಷಣವು ಹಣ ಬೆಳೆಯುವ ಮರದಂತೆ ಆಗಿದ್ದು, ಹಣ ಉಳಿಸಲು ಕಳಪೆ ಗುಣಮಟ್ಟದ ಶಿಕ್ಷಣ ನೀಡುವುದು ಪರಿಪಾಠವಾಗಿ ಬಿಟ್ಟಿದೆ ಎಂದು ಖೇದ ವ್ಯಕ್ತ ಪಡಿಸಿದರು.

ಭಾರತೀಯ ವಿದ್ಯಾರ್ಥಿಗಳಿಗೆ ಪ್ರತಿಭೆಯೇ ಕಿರೀಟ. ಅದನ್ನು ಬೆಳೆಸಿ ಪ್ರೋತ್ಸಾಹಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದೇ ಶಿಕ್ಷಣದ ಆದ್ಯತೆಯಾಗಬೇಕು. ಮುಕ್ತ ಚರ್ಚೆಗೆ, ವಿಚಾರವಿನಿಮಯಕ್ಕೆ ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ಆವರಣ ವೇದಿಕೆಯಾಗಿರಬೇಕು. ದೇಶದಲ್ಲಿ ಇಂದು ಹಲವಾರು ಸಮಸ್ಯೆಗಳಿವೆ. ಭ್ರಷ್ಟಾಚಾರ, ಕೋಮುವಾದ, ಜಾತ್ಯಾತೀತತೆಯ ಭೂತ ಬೆಂಬಿಡದೇ ಕಾಡುತ್ತಿದೆ. ನಗರ-ಗ್ರಾಮಾಂತರಗಳಲ್ಲಿ ಬಡತನದ ಅಂತರ ಹೆಚ್ಚುತ್ತಿದೆ. ಇವೆಲ್ಲವನ್ನೂ ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಅವಲೋಕಿಸಬೇಕು ಎಂದು ಕಿವಿ ಮಾತು ಹೇಳಿದರು.

ದೇಶದ ಬಹುಸಂಖ್ಯಾತ ಜನಸಂಖ್ಯೆಯು ಯುವಕರಿಂದಲೇ ಕೂಡಿದ್ದು, ಸಮಾಜಮುಖಿ ಆಶಯವನ್ನು ಯುವಕರು ಬೆಳೆಸಿಕೊಳ್ಳಬೇಕು. ಸಮಾಜವಾದವನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಯು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.

ಘಟಿಕೋತ್ಸವದಲ್ಲಿ ಸ್ನಾತಕೋತ್ತರ ವಿಭಾಗದ ಐವರು ಹಾಗೂ ಪದವಿ ವಿಭಾಗದ ಇಪ್ಪತ್ತೈದು ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಲವತ್ತೈದು ಸ್ನಾತಕೋತ್ತರ ಹಾಗೂ ನೂರಾತೊಂಭತ್ತೆಂಟು ಪದವಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ವೇದಿಕೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣೇಗೌಡ, ಕಾಲೇಜಿನ ರೆಕ್ಟರ್ ಲೆಸ್ಲಿ ಮೊರಾಸ್, ಫಾದರ್ ವಿಲಿಯಂ, ಪ್ರೊ.ಪಿಂಟೋ, ಪ್ರೊ.ಸುಜಾತಾ ದೇವಿ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: