ಮೈಸೂರು

ಪೇಪರ್ ಕೇಳುವ ನೆಪದಲ್ಲಿ ಹಣ ದೋಚಿ ಪರಾರಿ

ಮೈಸೂರಿನಲ್ಲಿ ಮನೆಯಲ್ಲಿರುವ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಮನೆ ದೋಚುವ ಪ್ರಕರಣ ಹೆಚ್ಚುತ್ತಿದೆ. ಹೂಟಗಳ್ಳಿಯ ಕೆ.ಎಚ್.ಬಿ ಕಾಲೋನಿಯ ಸೋಮವಾರ ಒಂಟಿ ಮಹಿಳೆಯಿರುವ ವೇಳೆ ಪೇಪರ್ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಮಹಿಳೆಯರ ಗುಂಪೊಂದು ಮನೆಯಲ್ಲಿದ್ದ ನಗದನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.

ಹೂಟಗಳ್ಳಿಯ ಕೆ.ಎಚ್.ಬಿ ಕಾಲೋನಿ ನಿವಾಸಿ ರಮೇಶ್ ಎಂಬವರ ಪತ್ನಿ ಶಾಂತಮ್ಮ(50) ಎಂಬವರ ಮನೆ ಬಳಿ ಬಂದ ಯುವಕನೋರ್ವ ಬಟ್ಟೆ ಒಣ ಹಾಕುತ್ತಿದ್ದ ಶಾಂತಮ್ಮ ಅವರ ಬಳಿ ಬಂದು ರದ್ದಿ ಪೇಪರ್ ಇದೆಯಾ ಎಂದು ಪ್ರಶ್ನಿಸಿದ್ದ ಎನ್ನಲಾಗಿದೆ. ಪೇಪರ್ ಇಲ್ಲ ಎಂದು ಮನೆಯೊಳಗೆ ಹಿಂದಿರುಗುತ್ತಿದ್ದಂತೆ ಮನೆಯೊಳಗೆ ನುಗ್ಗಿದ ಯುವಕ ಅವರನ್ನು ಹಿಂಬದಿಯಿಂದ ಹಿಡಿದುಕೊಂಡು ಬಾಯಿಮುಚ್ಚುತ್ತಿದ್ದಂತೆ ಮನೆಯೊಳಗೆ ಇಬ್ಬರು ಮಹಿಳೆಯರು ನುಗ್ಗಿದ್ದು, ಸೀರೆಯಿಂದ ಕಣ್ಣನ್ನು ಮುಚ್ಚಿಸಿ ಪಾನೀಯವನ್ನು ಬಲವಂತವಾಗಿ ಕುಡಿಸಿದ್ದಾರೆ ಎನ್ನಲಾಗಿದೆ. ಅವರು ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ಮನೆಯನ್ನೆಲ್ಲ ಜಾಲಾಡಿದ ಕಳ್ಳರು ಬೀರುವಿನಲ್ಲಿರಿಸಿದ್ದ 30,000ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಒಂದು ಗಂಟೆಯ ಬಳಿಕ ಶಾಂತಮ್ಮ ಅವರಿಗೆ ಪ್ರಜ್ಞೆ ಮರುಕಳಿಸಿದ್ದು ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ವಿಜಯನಗರ ಠಾಣೆ ಪೊಲೀಸರು ಪರಿಶೀಲಿಸಿದ್ದು ತನಿಖೆ ಮುಂದುವರಿಸಿದ್ದಾರೆ.

Leave a Reply

comments

Related Articles

error: