ಕರ್ನಾಟಕಪ್ರಮುಖ ಸುದ್ದಿ

ಕೇಶವಕೃಪಾದಲ್ಲಿ ಇಂದು ಬಿಜೆಪಿ-ಆರೆಸ್ಸೆಸ್ ಮಹತ್ವದ ಸಭೆ : ಮುಂದಿನ ಚುನಾವಣೆಗೆ ತಯಾರಿ

ಬೆಂಗಳೂರು, ಆ.30 : ಚಾಮರಾಜಪೇಟೆಯಲ್ಲಿನ ಸಂಘದ ಕಚೇರಿ ಕೇಶವಾಕೃಪಾದಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ – ಆರ್‌ಎಸ್‌ಎಸ್ ರಾಜ್ಯ ಮುಖಂಡರ ಮಹತ್ವದ ಸಮಾಲೋಚನಾ ಸಭೆ ಇಂದು ನಡೆಯುತ್ತಿದೆ.

ಬೆಳಗ್ಗೆ ಸುಮಾರು 9 ಗಂಟೆಗೆ ಆರಂಭವಾಗಿರುವ ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಾಯಕರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಪ್ರಹ್ಲಾದ್ ಜೋಶಿ, ಆರ್.ಅಶೋಕ್, ಸಿ.ಟಿ.ರವಿ, ಅರವಿಂದ್ ಲಿಂಬಾವಳಿ ಮೊದಲಾದ ಮುಖಂಡರು ಭಾಗವಹಿಸಲಿದ್ದು ಪಕ್ಷ ಸಂಘಟನೆ ಬಲಪಡಿಸುವ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ.

ಬಹಳ ಸಮಯದ ನಂತರ ಆರೆಸ್ಸೆಸ್ ಮತ್ತು ರಾಜ್ಯ ಬಿಜೆಪಿ ನಾಯಕರ ನಡುವೆ ಸಮಾಲೋಚನೆ ನಡೆಯುತ್ತಿರುವುದರಿಂದ ಸಭೆಯ ಅವಧಿ ದೀರ್ಘವಾಗಿ ವಿಸ್ತರಿಸಿದೆ. ಬಿಜೆಪಿ ಸಂಘಟನೆ ಮತ್ತು ಮುಂದಿನ ಚುನಾವಣೆಯನ್ನು ಎದುರಿಸುವ ಸಂಬಂಧವಾಗಿ ವಿಸ್ತೃತವಾಗಿ ಸಮಾಲೋಚನೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಮುಖ್ಯವಾಗಿ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದ ಬಳಿಕ ಸಂಘದೊಂದಿಗೆ ಭಿನ್ನಾಭಿಪ್ರಾಯ ಆರಂಭವಾಗಿದ್ಉ, ಪದಾಧಿಕಾರಿಗಳ ನೇಮಕದಲ್ಲಿ ನೀಡಿದ್ದ ಸಲಹೆ-ಸೂಚನೆ ಪಾಲಿಸಲಿಲ್ಲ ಎಂಬ ಬೇಸರ ಆರ್‌ಎಸ್‌ಎಸ್ ಮುಖಂಡರಲ್ಲಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಯಡಿಯೂರಪ್ಪ – ಆರ್‌ಎಸ್‌ಎಸ್ ಮುಖಂಡರ ಜತೆ ಮಾತುಕತೆ ನಡೆಸುವ ಮೂಲಕ ಬಿಕ್ಕಟ್ಟಿಗೆ ಅಂತ್ಯ ಹಾಡಿದ್ದರು. ಈ ವೇಳೆ ಆರ್‌ಎಸ್‌ಎಸ್ ಮುಖಂಡರ ಸಲಹೆ-ಸೂಚನೆಗೆ ಮನ್ನಣೆ ನೀಡಬೇಕು ಎಂಬ ನಿರ್ದೇಶನವನ್ನೂ ಯಡಿಯೂರಪ್ಪ ಅವರಿಗೆ ನೀಡಿದ್ದರು.

ಅಮಿತ್ ಶಾ ಸೂಚನೆ ಪ್ರಕಾರ ಯಡಿಯೂರಪ್ಪ ಅವರು ಪಕ್ಷದ ಮುಖಂಡರು ಹಾಗೂ ಆರ್‍ಎಸ್‌ಎಸ್ ಮುಖಂಡರ ಸಭೆ ಕರೆದು ಸಮಾಲೋಚನೆ ನಡೆಸುತ್ತಿದ್ದಾರೆ.

-ಎನ್.ಬಿ.

Leave a Reply

comments

Related Articles

error: