ಕ್ರೀಡೆಪ್ರಮುಖ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾಗೆ ೨೦ ರನ್‌ಗಳ ಐತಿಹಾಸಿಕ ಜಯ 

ಪ್ರಮುಖ ಸುದ್ದಿ, ಢಾಕಾ, ಆ.೩೦: ಆಸ್ಟ್ರೇಲಿಯಾ ಹಾಗೂ ಆತಿಥೇಯ ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ೨೦ ರನ್‌ಗಳ ಐಸಿಹಾಸಿಕ ಜಯ ಸಾಧಿಸಿದೆ.

ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು ೨೬೫ ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಬಾಂಗ್ಲಾ ಬೌಲರ್‌ಗಳ ದಾಳಿಗೆ ತತ್ತರಿಸಿ ಕೇವಲ ೨೪೪ ರನ್‌ಗಳಿಗೆ ಆಲೌಟ್ ಆಗುವ ಮೂಲಕ ೨೦ ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಬಾಂಗ್ಲಾದೇಶ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿತು. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ತಮಿಮ್ ಇಕ್ಬಾಲ್ (೭೧) ಹಾಗೂ ಶಕೀಬ್ ಅಲ್ ಹಸನ್ (೮೪) ಗಳಿಸಿದ ಅರ್ಧಶತಕದ ನೆರವಿನಿಂದ ೨೬೦ ರನ್‌ಗಳಿಸಿತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ  ೨೧೭ ರನ್‌ಗಳಿಗೆ ಆಲೌಟ್ ಆಗಿ ೪೩ರನ್‌ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ೨೨೧ ರನ್‌ಗಳಿಸಿ ಆಸ್ಟ್ರೇಲಿಯಾಗೆ ಗೆಲ್ಲಲು ೨೬೫ರನ್ ಗುರಿ ನೀಡಿತು.

ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ (೧೧೨) ಶತಕದ ಹೊರತಾಗಿಯೂ ೨೪೪ ರನ್‌ಗಳಿಗೆ ಆಲೌಟಾಯಿತು. ಬಾಂಗ್ಲಾ ಪರ ಅಮೋಘ ದಾಳಿ ನಡೆಸಿದ ಶಕೀಬ್ ಅಲ್ ಹಸನ್ ೫ ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದ ಶಕೀಬ್ ಅಲ್ ಹಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. (ವರದಿ ಬಿ.ಎಂ)

 

Leave a Reply

comments

Related Articles

error: