ಮೈಸೂರು

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ : ಡಿ.ಪಿ.ಸಿಂಗ್ ಕರೆ

ದೇಶದ ಜನಸಂಖ್ಯೆಯಲ್ಲಿ ಶೇ.55ರಷ್ಟು 25 ವರ್ಷದೊಳಗಿನ ಯುವಕರಿದ್ದು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ದೇಶದ ಆಸ್ತಿಗಳನ್ನಾಗಿ ರೂಪಿಸಬೇಕು ಎಂದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿಯ ನಿರ್ದೇಶಕ ಡಿ.ಪಿ.ಸಿಂಗ್ ಕರೆ ನೀಡಿದ್ದಾರೆ.

ಮಂಗಳವಾರ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಒಂಭತ್ತನೇ ಪದವೀಧರರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಡಿ.ಪಿ.ಸಿಂಗ್ ಪದವಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು ಯುವಕರು ದೇಶದ ಆಸ್ತಿ. ಒಂದು ರಾಷ್ಟ್ರದ ಭವಿಷ್ಯ ನಿರ್ಧರಿಸಲ್ಪಡುವುದು ಯುವಕರ ಶಿಕ್ಷಣ ಹಾಗೂ ಅವರು ಹೊಂದಿರುವ ಕೌಶಲ್ಯಗಳಿಂದ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಕೇವಲ ಉದ್ಯೋಗಾಧಾರಿತ ಶಿಕ್ಷಣ ನೀಡದೆ ಮೌಲ್ಯಾಧಾರಿತ, ಕೌಶಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ರಾಷ್ಟ್ರದ ಸಾಮಾಜಿಕ, ಆರ್ಥಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬಲ್ಲಂತಹ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರಲ್ಲೂ ಅವರದೇ ಆದ ಶಕ್ತಿ, ಸಾಮರ್ಥ್ಯಗಳಿರುತ್ತವೆ. ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಿಗುವ ವೇದಿಕೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಅವಕಾಶಗಳು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶಗಳನ್ನು ಕೈಚೆಲ್ಲಿ ಕೂರಬಾರದು. ನಿಮ್ಮದೇ ಹಾದಿಯನ್ನು ಸೃಷ್ಟಿಸಿಕೊಳ್ಳಬೇಕು. ನೂರಕ್ಕೆ ನೂರರಷ್ಟು ಶ್ರಮವಹಿಸಿ ಪ್ರಯತ್ನಿಸಿದರೆ ಯೋಜಿತ ಗುರಿಯನ್ನು ನಿರ್ದಿಷ್ಟ ಸಮಯದಲ್ಲಿ ತಲುಪಬಹುದು. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗಾಗಿ ವರ್ತಮಾನದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ದೇಶದ ಅಭಿವೃದ್ಧಿಗೆ ಶ್ರಮಿಸಿ ಎಂದು ತಿಳಿಸಿದರು.

ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಸ್ಥಾನವಿದೆ. ಸಮಾಜದ ಅಭಿವೃದ್ಧಿ ಹಾಗೂ ಅವನತಿಗಳೆರಡೂ ಶಿಕ್ಷಕರ ಹೆಗಲ ಮೇಲಿರುವುದರಿಂದ ತಮ್ಮಲ್ಲಿರುವ ಪ್ರತಿಭೆ, ಕೌಶಲಗಳೆಲ್ಲವನ್ನೂ ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಸಮಾಜದ ಉನ್ನತಿಗೆ ಕಾರಣ ಕರ್ತರಾಗಬೇಕು. ಗುರು-ಶಿಷ್ಯರ ಸಂಬಂಧ ಅವಿನಾಭಾವವಾದುದಾಗಿದ್ದು ಮಾನವೀಯ ನೆಲೆಗಟ್ಟಿನಲ್ಲಿ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಬೇಕು ಎಂದರು.

ಬಹುಮಾನ ವಿಜೇತರು: ಸ್ನಾತಕೋತ್ತರ ವಿಭಾಗದ ಕನ್ನಡ ವಿಭಾಗದಲ್ಲಿ ಜಾನವಿ ಪ್ರಥಮ, ಶಿವಲೀಲಾ ದ್ವಿತೀಯ, ಜ್ಯೋತಿ ತೃತೀಯ ಸ್ಥಾನ ಪಡೆದಿದ್ದು,  ಇಂಗ್ಲಿಷ್ ವಿಭಾಗದಲ್ಲಿ ಸಹನ, ಸುಮಾ, ಉಮಾ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಭೌತಶಾಸ್ತ್ರ ವಿಭಾಗದಲ್ಲಿ ಕವಿತಾ ಕಕನೂರ್ ಪ್ರಥಮ, ಭಾನವಿ ದ್ವಿತೀಯ, ತಸ್ಲೀಮಾ ತೃತೀಯ ಸ್ಥಾನ ಪಡೆದಿದ್ದು, ರಸಾಯನಶಾಸ್ತ್ರ ವಿಭಾಗದಲ್ಲಿ ಶ್ವೇತಾ ಪ್ರಥಮ, ಗೀತಾ ದ್ವಿತೀಯ, ಮಹದೇವಸ್ವಾಮಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗಣಕ ವಿಜ್ಞಾನ ವಿಭಾಗದಲ್ಲಿ ತಜುನ ಪ್ರಥಮ, ಅಪೂರ್ವ ದ್ವಿತೀಯ ಹಾಗೂ ಚಾಂದಿನಿ ಎಂ.ಎನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‍ಎಸ್ ವಿಶ್ವವಿದ್ಯಾನಿಲಯ ಕುಲಪತಿ ಡಾ.ಬಿ.ಸುರೇಶ್, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರುಮಠ್, ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಕಲ್ಪನಾ ಸಿಂಗ್, ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ ಉಪಸ್ಥಿತರಿದ್ದರು

Leave a Reply

comments

Related Articles

error: