ಪ್ರಮುಖ ಸುದ್ದಿಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಕೈ ಹಿಡಿಯದಿದ್ದರೆ ಅಂದಿಗೆ ನನ್ನ ರಾಜಕೀಯ ಜೀವನವೇ ಮುಗಿದು ಹೋಗುತ್ತಿತ್ತು : ಸಿದ್ದರಾಮಯ್ಯ

ಮೈಸೂರು,a.30:- ಉದ್ಭೂರಿನ ಜನರಿಗೂ ನನಗೂ ಸುಮಾರು 35 ವರ್ಷಗಳ ಸಂಬಂಧವಿದೆ. ಅದಕ್ಕಿಂತ ಮೊದಲು ಕೂಡ ಈ ಗ್ರಾಮಕ್ಕೆ ಮತ ಕೇಳಲು ಬಂದಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಮೈಸೂರು ತಾಲೂಕು ಉದ್ಬೂರು ಗ್ರಾಮದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು1983ರಲ್ಲಿ ಚುನಾವಣೆಗೆ ಸ್ಪರ್ಧಿಸಿದಂದಿನಿಂದಲೂ ಈ ಕ್ಷೇತ್ರದ ಜನ ನನ್ನನ್ನು ಬೆಂಬಲಿಸುತ್ತಾ ಬಂದಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಚಿಂತಿಸಿದ್ದೇನೆಂದು ಬಹಿರಂಗ ಸಭೆಯಲ್ಲಿ ಘೋಷಿಸಿದರು.  2006 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನ ಕೈ ಹಿಡಿಯದಿದ್ದರೆ ಅಂದಿಗೆ ನನ್ನ ರಾಜಕೀಯ ಜೀವನವೇ ಮುಗಿದು ಹೋಗುತ್ತಿತ್ತು.  ಆದರೆ ಆಗ ನನ್ನನ್ನು ಈ ಕ್ಷೇತ್ರದ ಜನ ಆರಿಸಿ ಕಳಿಸಿದ್ದರಿಂದಲೇ ನಾನೀಗ ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಿಟಿಡಿ ಕೂಡ ಒಳಗೊಳಗೇ ನನ್ನನ್ನು ಬೆಂಬಲಿಸಿರುವ ಸಾಧ್ಯತೆಯಿದೆ ಅಲ್ಲವೇ ಎಂದು ವೇದಿಕೆಯಲ್ಲಿ ಆಸೀನರಾಗಿದ್ದ ಶಾಸಕ ಜಿಟಿಡಿ ಗೆ ಟಾಂಗ್ ನೀಡಿದರು.

ಬೆಂಗಳೂರು ಮಾದರಿಯಲ್ಲಿ ಮೈಸೂರಿನಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಸಿ.ಎಂ ಸಿದ್ದರಾಮಯ್ಯ ನವರಿಗೆ  ಜನರ ಒತ್ತಾಯ ಕೇಳಿ ಬಂತು. ಇದಕ್ಕೆ ಪ್ರತಿಯಾಗಿ ಹಂತ ಹಂತವಾಗಿ ಇತರ ನಗರಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಭರವಸೆ ನೀಡಿದರು. ಸಿದ್ದರಾಮಯ್ಯ ಅಹಿಂದ ಪರವಾಗಿದ್ದಾರೆಂಬ ಆರೋಪಗಳಿಗೂ ಟಾಂಗ್ ನೀಡಿದ ಮುಖ್ಯಮಂತ್ರಿಗಳು  ಸರ್ಕಾರ ಜಾರಿಗೆ ತಂದಿರುವ ಅಭಿವೃದ್ದಿ ಯೋಜನೆಗಳನ್ನು ಕೇವಲ ಅಹಿಂದ ವರ್ಗಕ್ಕೆ ನೀಡಲಾಗುತ್ತಿದೆಯಾ? ಎಂದು ಪ್ರಶ್ನಿಸಿದರು.ಸಮಾಜದ ಎಲ್ಲಾ ವರ್ಗದ ಬಡ ಜನರಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗಿದೆ ಎಂದು ಪ್ರತಿಪಾದಿಸಿದರು. ಗೌಡ, ಲಿಂಗಾಯಿತ, ಬ್ರಾಹ್ಮಣರ ವಿರೋಧಿಯಾಗಿದ್ದಾರೆ ಎಂದು ಮಾಡುತ್ತಿರುವ ಆರೋಪಗಳನ್ನು ತಳ್ಳಿ ಹಾಕಿದ ಅವರು ನಾನು ಎಲ್ಲಾ ವರ್ಗದ ಜನರ ಪರವಾಗಿದ್ದೇನೆಂದು ಹೇಳಿದರು. ವರುಣಾ ಹೇಗೆ ನನಗೆ ಒಂದು ಕಣ್ಣಾಗಿದೆಯೋ ಅದೇ ರೀತಿ ಚಾಮುಂಡೇಶ್ವರಿ ಕ್ಷೇತ್ರ ಮತ್ತೊಂದು ಕಣ್ಣಾಗಿದೆ. ಈ ಎರಡೂ ಕ್ಷೇತ್ರಗಳೂ ನನ್ನ ಎರಡು ಕಣ್ಣುಗಳಿದ್ದಂತೆ. ಯಾರು ಎಷ್ಟೇ ತಿಪ್ಪರಲಾಗ ಹಾಕಿದರೂ ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುವುದು ಖಚಿತ ಎಂದು ನುಡಿದರು.

ಏತನ್ಮಧ್ಯೆ  ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮನಕ್ಕೂ ಮೊದಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಪರವಾಗಿ ಜೆಡಿಎಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಉದ್ಬೂರು ಗ್ರಾಮದಲ್ಲಿ ಕಾವೇರಿದಂತಹ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದ ಎಲ್ಲೆಡೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದರು. ಉದ್ಬೂರು ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವುದು ಬಹಳ ತಡವಾದ ಹಿನ್ನೆಲೆಯಲ್ಲಿ ಜನರನ್ನು ರಂಜಿಸಲು  ಆಹಾರ ಇಲಾಖೆಯ ಉಪನಿರ್ದೇಶಕ ಕಾ. ರಾಮೇಶ್ವರಪ್ಪ ತಿಂಗಳು ಮುಳುಗಿದವೋ, ರಂಗೋಲಿ ಬೆಳಗಿದವೋ ಎಂಬ ಭಾವಗೀತೆಯನ್ನು ಹಾಡಿದರು ಅಷ್ಟೇ ಅಲ್ಲದೇ ಎಲ್ಲೋ ಜೋಗಪ್ಪ ನಿನ್ನ ಅರಮನೆ ಜನಪದ ಗೀತೆ ಹಾಡಿ ರಂಜಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: