ಮೈಸೂರು

ರಾಜ್ಯಮಟ್ಟದ ಬ್ರಾಹ್ಮಣರ ಸಮ್ಮೇಳನ : ಅ.27ರಂದು ಪೂರ್ವಭಾವಿ ಸಭೆ

ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೇತೃತ್ವದಲ್ಲಿ ರಾಜ್ಯ ಮಟ್ಟದ 9ನೇ ಬ್ರಾಹ್ಮಣ ಸಮ್ಮೇಳನವನ್ನು ಡಿ.11 ಮತ್ತು 12ರಂದು ಬೆಳಗಾವಿಯ ಗಾಯತ್ರಿ ಸಭಾ ಮಂಟಪದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನದಂಗವಾಗಿ ಪೂರ್ವ ಸಿದ್ಧತಾ ಸಭೆ ಕರೆಯಲಾಗಿದೆ ಎಂದು ಅಖಿಲ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಹಾಗೂ ಮೈಸೂರು ಘಟಕದ ಗೌರವಾಧ್ಯಕ್ಷ ಕೆ.ರಘುರಾಂ ತಿಳಿಸಿದರು.
ಅವರು, ಮಂಗಳವಾರದಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಮ್ಮೇಳನದಲ್ಲಿ ಪಾಲ್ಗೊಳ್ಳುವವರ ಪೂರ್ವಭಾವಿ ಸಭೆಯನ್ನು ಅ.27ರ ಸಂಜೆ 5 ಗಂಟೆಗೆ ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಚೇರಿ, ಅಮ್ಮ ಕಾಂಪ್ಲೆಕ್ಸ್ ಹತ್ತಿರ, ರಾಮಕೃಷ್ಣ ನಗರ ಇಲ್ಲಿ ಆಯೋಜಿಸಲಾಗಿದ್ದು ಅಂದು ಸಮ್ಮೇಳನದ ರೂಪುರೇಷೆಗಳ ಬಗ್ಗೆ ಹಾಗೂ ಮೈಸೂರಿನಿಂದ ಭಾಗವಹಿಸಲಿಚ್ಛಿಸುವವರ ಹೆಸರು ನೋಂದಣಿ ಸೇರಿದಂತೆ ಇತರೆ ವಿಷಯಗಳನ್ನು ಚರ್ಚಿಸಲಾಗುವುದು. ಎರಡು ದಿನಗಳ ಸಮಾವೇಶದಲ್ಲಿ ಲಕ್ಷಾಂತರ ವಿಪ್ರ ಪ್ರತಿನಿಧಿಗಳು ಭಾಗವಹಿಸುವ ಮುನ್ಸೂಚನೆಯಿದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಡಿ.10ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಮೈಸೂರಿನಿಂದ ತೆರಳುತ್ತಿದ್ದು ಮನೆಗೊಬ್ಬರಂತೆ ಸುಮಾರು ಎಂಟು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ ಮಾತನಾಡಿ, ಸಮುದಾಯಕ್ಕೆ ಸರ್ಕಾರದಿಂದ ಮೀಸಲಾತಿ ಇಲ್ಲದೆ ಬಡವರು ಇನ್ನೂ ಬಡವರಾಗುತ್ತಿದ್ದು, ಮೀಸಲಾತಿಗೆ ಆಗ್ರಹಿಸಿ ಸಮ್ಮೇಳನದಲ್ಲಿ ನಿರ್ಣಯ ಮಂಡಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಅನಂತ್ ಪ್ರಸಾದ್, ಸದಸ್ಯರಾದ ಜಿ.ಆರ್. ವಿದ್ಯಾರಣ್ಯ ಹಾಗೂ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

Leave a Reply

comments

Related Articles

error: