ಕರ್ನಾಟಕಪ್ರಮುಖ ಸುದ್ದಿ

ತ್ವರಿತವಾಗಿ ನ್ಯಾಯ ದೊರಕಿಸಲು ಜನತಾ ನ್ಯಾಯಾಲಯ ಸ್ಥಾಪಿಸಲಿರುವ ಕಾನೂನು ಪ್ರಾಧಿಕಾರ

ಬೆಂಗಳೂರು, ಆ. 30 : ಜನಸಾಮಾನ್ಯರು ಯಾವುದೇ ಕಾನೂನಾತ್ಮಕ ವಿವಾದಗಳನ್ನು ಸೆಪ್ಟಂಬರ್ 9  ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‍ಗೆ ವಹಿಸಿ ಅತ್ಯಂತ ತ್ವರಿತವಾಗಿ ಮತ್ತು ಯಾವುದೇ ವೆಚ್ಚವಿಲ್ಲದೆ ಸಮಾಧಾನಕರವಾದ ಪರಿಹಾರವನ್ನು ಪಡೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ತಿಳಿಸಿದೆ.

2017 ನೇ ಸಾಲಿನಲ್ಲಿ ಜನವರಿಯಿಂದ ಜುಲೈವರೆಗೆ ನ್ಯಾಯಾಲಯದಲ್ಲಿ ಬಾಕಿ ಇದ್ದಂತಹ 39,292 ಪ್ರಕರಣಗಳನ್ನು ಹಾಗೂ 18,689 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗಿದೆ. “ಸರ್ವರಿಗೂ ನ್ಯಾಯ” ಎಂಬುದು ಭಾರತದ ಕಾನೂನು ಸೇವೆಗಳ ಧ್ಯೇಯವಾಗಿದೆ. ಜನಸಾಮಾನ್ಯರಿಗೆ ಅತೀ ತ್ವರಿತ ಹಾಗೂ ವೆಚ್ಚವಿಲ್ಲದೆ ನ್ಯಾಯ ದೊರಕಿಸಲು ಜನತಾ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ.

ನ್ಯಾಯಾಲಯದ ಮೊರೆ ಹೋಗದೆ ಸರಳ ಹಾಗೂ ಹೆಚ್ಚು ಸಮಯ ಬೇಕಿರದ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಜನತಾ ನ್ಯಾಯಾಲಯದ ಒಂದು ಸಶಕ್ತ ಆಯುಧವಾಗಿ ಕಾರ್ಯ ನಿರ್ವಹಿಸುತ್ತಿದೆ.  ಈ ಉದ್ದೇಶವನ್ನಿಟ್ಟುಕೊಂಡು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಏರ್ಪಡಿಸಲು ನಿರ್ಧರಿಸಲಾಗಿದ್ದು, ಸದರಿ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಎಲ್ಲಾ ರೀತಿಯ ವ್ಯಾಜ್ಯ ಪೂರ್ವ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶ ಹೊಂದಲಾಗಿದೆ.

ಸೆಪ್ಟಂಬರ್ 9  ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಸಾರ್ವಜನಿಕರು ಅವರ ವಿವಾದ/ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಉಚ್ಫ ನ್ಯಾಯಾಲಯದ ಕಾನೂನು ಸೇವಾ ಸಮಿತಿಯನ್ನು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳನ್ನು, ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಅಥವಾ ಖಾಯಂ ಜನತಾ ನ್ಯಾಯಾಲಯಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

-ಎನ್.ಬಿ.

Leave a Reply

comments

Related Articles

error: